ಕರ್ನಾಟಕ

karnataka

ETV Bharat / entertainment

ಕನ್ನಡಿಗರ 'ಪರಮಾತ್ಮ'ನ ಜನ್ಮದಿನ: ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದ ಅಪ್ಪು - Puneeth Rajkumar

ಪುನೀತ್​ ರಾಜ್​ಕುಮಾರ್ ನಮ್ಮೊಂದಿಗಿದ್ದಿದ್ದರೆ ಇಂದು 48ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಆದರೆ ವಿಧಿಯಾಟದ ಮುಂದೆ ಎಲ್ಲವೂ ಶೂನ್ಯ. ಅವರ ಹೆಸರಿನಲ್ಲಿ ಸಾಮಾಜಿಕ ಕಾರ್ಯಗಳು ಮುಂದುವರಿದಿದೆ.

Puneeth Rajkumar
ಪುನೀತ್​​ ರಾಜ್​ಕುಮಾರ್

By ETV Bharat Karnataka Team

Published : Mar 17, 2024, 5:53 AM IST

ಪುನೀತ್​ ರಾಜ್​ಕುಮಾರ್. ಯಾವುದೇ ಪೀಠಿಕೆಯ ಅಗತ್ಯವಿಲ್ಲ. ಪುನೀತ ಎನ್ನುವ ಹೆಸರೇ ಸಾಕು. ಅಪ್ಪು ನಮ್ಮನ್ನೆಲ್ಲ ಅಗಲಿ ಎರಡೂವರೆ ವರ್ಷ. ಆದ್ರೆ ಅಭಿಮಾನಿಗಳ ಮನದಲ್ಲಿ ಅವರ ನೆನಪು ಮಾತ್ರ ಜೀವಂತ. ದಿನಗಳು ಉರುಳುತ್ತಿದ್ದರೂ ಆ ಪರಮಾತ್ಮನ ಜಪ ಮಾತ್ರ ಮುಂದುವರಿದಿದೆ. ಅವರು ನಮ್ಮೊಂದಿಗಿದ್ದಿದ್ದರೆ ಇಂದು 48ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಆದ್ರೆ ವಿಧಿಯಾಟದ ಮುಂದೆ ಎಲ್ಲವೂ ಶೂನ್ಯ. ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಜನ್ಮದಿನವನ್ನು ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಅಪ್ಪು ಹೆಸರಿನಲ್ಲಿ ಪುಣ್ಯ ಕಾರ್ಯಗಳು ಮುಂದುವರಿದಿವೆ.

ಪುನೀತ್​​ ರಾಜ್​ಕುಮಾರ್

2021ರ ಅಕ್ಟೋಬರ್​ 29 ಕನ್ನಡಿಗರ ಬಾಳಲ್ಲಿ ಕರಾಳ ದಿನ ಅಂತಲೇ ಹೇಳಬಹುದು. ಅಂದು ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಜನಪ್ರಿಯರಾಗಿದ್ದ ನಟ ಪುನೀತ್​ ರಾಜ್​ಕುಮಾರ್​ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತದಿಂದ​ ಪುನೀತ್​ ರಾಜ್​ಕುಮಾರ್ ನಿಧನರಾದರು.

ಹಠಾತ್ ಹೃದಯಾಘಾತ ಹಿನ್ನೆಲೆ ಸ್ಯಾಂಡಲ್​ವುಡ್​ನ 'ರಾಜಕುಮಾರ' ಇಹಲೋಕ ತ್ಯಜಿಸಿದರು. ಅಕಾಲಿಕ ನಿಧನವನ್ನು ಸ್ವೀಕರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇಡೀ ಭಾರತವಿತ್ತು. ಅಂದು ಇಡೀ ದೇಶವೇ ಕಂಬನಿ ಮಿಡಿದಿತ್ತು. ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗ, ವಿವಿಧ ಕ್ಷೇತ್ರಗಳ ಗಣ್ಯರು ಸಹ ಆಘಾತಗೊಂಡಿದ್ದರು. ಈ ಆಘಾತಕಾರಿ ಸುದ್ದಿ ಕೇಳಿ ಕೊನೆಯುಸಿರೆಳೆದವರ ಸಂಖ್ಯೆ ಕೂಡ ದೊಡ್ಡದಿದೆ. ಹಲವು ಅಭಿಮಾನಿಗಳು ಆತ್ಮಹತ್ಯೆಗೆ ಶರಣಾದರು. ಹಲವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅದೆಷ್ಟೋ ದಿನಗಳವರೆಗೆ ಕನ್ನಡ ಚಿತ್ರರಂಗದಲ್ಲಿ ನೀರವ ಮೌನ. ನಂತರದ ದಿನಗಳಲ್ಲಿ ಪುನೀತ್​ ರಾಜ್​ಕುಮಾರ್​​ ಹೆಸರಿನಲ್ಲಿ ಸಮಾಜ ಸೇವೆ ಆರಂಭಗೊಂಡಿದ್ದು, ಇಂದಿಗೂ ಜರುಗುತ್ತಿದೆ.

ಪುನೀತ್​​ ರಾಜ್​ಕುಮಾರ್

ಅಪ್ಪು 1975ರ ಮಾ. 17ರಂದು ಚೆನ್ನೈನಲ್ಲಿ ಜನಿಸಿದರು. ಡಾ. ರಾಜ್​​ಕುಮಾರ್ ಮತ್ತು ಪಾರ್ವತಮ್ಮ ದಂಪತಿಯ ಅವರ ಕಿರಿಯ ಪುತ್ರ. 1976ರಲ್ಲಿ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಮೊದಲ ಬಾರಿಗೆ ಬಾಲನಟನಾಗಿ ಸಿನಿಮಾಗೆ ಎಂಟ್ರಿ ಕೊಟ್ಟರು. ನಂತರ ಬೆಟ್ಟದ ಹೂ ಚಿತ್ರದ ಮೂಲಕ ಗಮನ ಸೆಳೆದರು. ಇದೇ ಚಿತ್ರದಲ್ಲಿನ ನಟನೆಗೆ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. 2002ರಲ್ಲಿ ಅಪ್ಪು ಸಿನಿಮಾ ಮೂಲಕ ನಾಯಕ ನಟನಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಅಭಿ (2003), ಆಕಾಶ್ (2005), ಅರಸು (2007) ವೀರ ಕನ್ನಡಿಗ (2004), ಮೌರ್ಯ (2004), ಆಕಾಶ್ (2005), ಅಜಯ್ (2006), ಮಿಲನ (2007), ವಂಶಿ (2008), ರಾಮ್ (2009), ಜಾಕಿ (2010), ಪೃಥ್ವಿ (2010) ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014), ಯುವರತ್ನ (2021) ಸೇರಿದಂತೆ ಸರಿ-ಸುಮಾರು 29 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಗಂಧದ ಗುಡಿ' ಪುನೀತ್​ ನಿಧನದ ನಂತರ ಬಿಡುಗಡೆಯಾದ ಸಾಕ್ಷ್ಯಚಿತ್ರ.

1999ರ ಡಿಸೆಂಬರ್ 1ರಂದು ಅಶ್ವಿನಿ ಅವರನ್ನು ಮದುವೆಯಾದರು. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಫ್ಯಾಮಿಲಿ ಮ್ಯಾನ್​ ಆಗಿಯೂ ಗುರುತಿಸಿಕೊಂಡಿದ್ದ ಅಪ್ಪು ಅವರ ಪ್ರತೀ ಕಾರ್ಯದಲ್ಲೂ ಅಶ್ವಿನಿ ಜೊತೆಯಾಗಿದ್ದರು. ಸದ್ಯ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರೇ ಸಿನಿಮಾ ನಿರ್ಮಾಣ ಸೇರಿದಂತೆ ಅಪ್ಪು ಅವರ ಪ್ರತೀ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:'RCB'ಗಾಗಿ ಲಾಂಗ್​ ಹಿಡಿದ ಶಿವಣ್ಣ: ಜಬರ್​ದಸ್ತ್​ ವಿಡಿಯೋ 'ಅರ್ಥ ಆಯ್ತಾ'?

ABOUT THE AUTHOR

...view details