ಬೆಳಗಾವಿ : 2025ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಜನ ಕಾತುರರಾಗಿದ್ದಾರೆ. 2024ರಲ್ಲಿ ಹಲವು ಸಿಹಿ-ಕಹಿ ಘಟನೆಗಳಿಗೆ ಬೆಳಗಾವಿ ಸಾಕ್ಷಿಯಾಗಿದೆ. ಅದರಲ್ಲಿ ಪ್ರಮುಖ ಸುದ್ದಿಗಳ ಹಿನ್ನೋಟ ಇಲ್ಲಿದೆ.
ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಹೊರ ವಲಯದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಸಾರುವ 'ಶಿಲ್ಪವನ' (ರಾಕ್ ಗಾರ್ಡನ್) ಮತ್ತು 150 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಸೈನಿಕ ಶಾಲೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಶಿಲ್ಪವನದಲ್ಲಿ 1600ಕ್ಕೂ ಅಧಿಕ ಮೂರ್ತಿಗಳು ಮನಮೋಹಕವಾಗಿವೆ.
ಸೈನಿಕ ಶಾಲೆಯಲ್ಲಿ 6 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ಭೋಜನಾಲಯ, ಗ್ರಂಥಾಲಯ, ಶಿಕ್ಷಕರ ವಸತಿ ಗೃಹ, ಆಡಿಟೋರಿಯಂ ಹಾಗೂ ಕೆಲಸಗಾರರು ಉಳಿದುಕೊಳ್ಳಲು ಹೈಟೆಕ್ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಬೃಹತ್ ಕ್ರೀಡಾ ಮೈದಾನ, ಒಳಾಂಗಣ ಮತ್ತು ಹೊರಾಂಗಣದಲ್ಲಿ ಬರುವ ಈಜುಕೊಳ, ಹಾರ್ಸ್ ರೈಡಿಂಗ್, ಹಾಕಿ, ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಅಥ್ಲೆಟಿಕ್ಸ್ ಸೇರಿದಂತೆ ಎಲ್ಲ ಕ್ರೀಡೆಗಳ ಆಟದ ಮೈದಾನವೂ ಇಲ್ಲಿದೆ.
ಶೆಟ್ಟರ್, ಪ್ರಿಯಾಂಕಾ, ಕಾಗೇರಿಗೆ ಜಾಕ್ಪಾಟ್ : ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿಯಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮೃಣಾಲ್ ಹೆಬ್ಬಾಳ್ಕರ್ ವಿರುದ್ಧ ಗೆದ್ದು, ರಾಜಕೀಯ ಪುನರ್ಜನ್ಮ ಪಡೆದರು. ಇನ್ನು ಚಿಕ್ಕೋಡಿಯಿಂದ ಅಣ್ಣಾಸಾಹೇಬ ಜೊಲ್ಲೆ ಸೋಲಿಸಿ ಜಾರಕಿಹೊಳಿ ಮನೆತನದ ಕುಡಿ ಪ್ರಿಯಾಂಕಾ ಮೊದಲ ಬಾರಿ ಸಂಸತ್ ಪ್ರವೇಶಿಸಿದರು. ಅದೇ ರೀತಿ ಉತ್ತರ ಕನ್ನಡದಿಂದ ಅಂಜಲಿ ನಿಂಬಾಳ್ಕರ್ ವಿರುದ್ಧ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿನ ನಗೆ ಬೀರಿದರು. ಮೂವರು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು.
ತಾಯಿ-ಮಕ್ಕಳ ರಕ್ಷಿಸಿದ್ದ ಬಾಲಕಿ : ಆಗಸ್ಟ್ 22ರಂದು ರಾತ್ರಿ 8.30ರ ವೇಳೆ ಕಾಂಗ್ರೆಸ್ ರಸ್ತೆಯ ರೈಲ್ವೆ ಫಸ್ಟ್ ಗೇಟ್ ಬಳಿ ರೈಲ್ವೆ ಹಳಿಯಲ್ಲಿ ಓರ್ವ ಅಪರಿಚಿತ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಗಮನಿಸಿದ 9ನೇ ತರಗತಿ ವಿದ್ಯಾರ್ಥಿನಿ ಸ್ಫೂರ್ತಿ ವಿಶ್ವನಾಥ್ ಸವ್ವಾಶೇರಿ ತನ್ನ ಸಮಯ ಪ್ರಜ್ಞೆಯಿಂದ ಮೂವರ ಜೀವ ಉಳಿಸಿದ್ದಳು. ಇದು ದೇಶಾದ್ಯಂತ ಸುದ್ದಿಯಾಗಿತ್ತು. ಬಾಲಕಿ ಶೌರ್ಯ ಮೆಚ್ಚಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತು.
ಕಟ್ಟಿಗೆ ಸ್ಟ್ರೆಚರ್ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದ ಮಹಿಳೆ ಸಾವು: ತೀವ್ರ ಜ್ವರದಿಂದ ಬಳಲುತ್ತಿದ್ದ ಖಾನಾಪುರ ಕಾಡಂಚಿನ ಅಮಗಾಂವ್ ಗ್ರಾಮದ ಹರ್ಷದಾ ಘಾಡಿ (42) ಎಂಬುವರನ್ನು ಕಟ್ಟಿಗೆಯಲ್ಲಿ ಸ್ಟ್ರೆಚರ್ ಮಾಡಿ ಐದು ಕಿ.ಮೀ ವರೆಗೂ ಸುರಿಯುತ್ತಿದ್ದ ಭಾರಿ ಮಳೆಯಲ್ಲಿ ಗ್ರಾಮಸ್ಥರು ಹೊತ್ತುಕೊಂಡು ಬಂದಿದ್ದರು. ಬಳಿಕ ಆಂಬ್ಯುಲೆನ್ಸ್ ಮೂಲಕ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆ ಮಹಿಳೆ ಕೊನೆಯುಸಿರೆಳೆದಿದ್ದರು. ಮುಖ್ಯರಸ್ತೆಯಿಂದ 12 ಕಿ.ಮೀ ಒಳಗೆ ದಟ್ಟ ಅರಣ್ಯ ಪ್ರದೇಶದಲ್ಲಿ ಅಮಗಾಂವ್ ಗ್ರಾಮವಿದೆ. ಇಲ್ಲಿನ ಜನರ ದಯನೀಯ ಸ್ಥಿತಿ ಆ ದೇವರಿಗೆ ಪ್ರೀತಿ ಎಂಬಂತಿದೆ.
ನಾವಗೆ ಟಿಕ್ಸೋ ಟೇಪ್ ಫ್ಯಾಕ್ಟರಿ ದುರಂತ : ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಬಳಿ ಇರುವ ಸ್ನೇಹಂ ಟಿಕ್ಸೋ ಟೇಪ್ ಕಂಪನಿ ಕಾರ್ಖಾನೆಯ ಬೆಂಕಿ ದುರಂತದಲ್ಲಿ ಮಾರ್ಕಂಡೇಯ ನಗರದ ನಿವಾಸಿ ಯಲಗೊಂಡ ಗುಂಡ್ಯಾಗೋಳ(20) ಸಾವನ್ನಪ್ಪಿದ್ದರು. ಲಿಫ್ಟ್‌ನಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದ್ದ ಯಲಗೊಂಡನ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹದ ಭಾಗಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಮುಚ್ಚಿ ಕುಟುಂಬಸ್ಥರಿಗೆ ಜಿಲ್ಲಾಡಳಿತ ಒಪ್ಪಿಸಿತ್ತು. ಪೋಷಕರು ಸಂತೆಗೆ ಒಯ್ಯುವ ಕೈ ಚೀಲದಲ್ಲೇ ಮಗನ ಮೃತದೇಹದ ಭಾಗಗಳನ್ನು ತೆಗೆದುಕೊಂಡು ಕಣ್ಣೀರು ಹಾಕುತ್ತಾ ಅಂತ್ಯಕ್ರಿಯೆಗೆ ಹೊರಟ ದೃಶ್ಯ ಎಲ್ಲರದ ಹೃದಯ ಕಲುಕಿತ್ತು. ಈ ಫ್ಯಾಕ್ಟರಿಗೆ ಹತ್ತಿದ್ದ ಬೆಂಕಿ ನಂದಿಸಲು ಮೂರು ದಿನ ಬೇಕಾಗಿತ್ತು. ಕಾರ್ಖಾನೆ ಮಾಲೀಕ ಮೃತ ಯಲಗೊಂಡ ಅವರ ಕುಟುಂಬಸ್ಥರಿಗೆ 18 ಲಕ್ಷ ರೂ. ಪರಿಹಾರ ವಿತರಿಸಿದ್ದರು.
ಮಹಾತ್ಮ ಫುಲೆ ಜನಾರೋಗ್ಯ ವಿಮೆ : ಕರ್ನಾಟಕದ ಬೆಳಗಾವಿ, ಕಾರವಾರ, ಬೀದರ್, ಕಲಬುರಗಿ ಹೀಗೆ ನಾಲ್ಕು ಜಿಲ್ಲೆಗಳ 865 ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರ ಮಹಾತ್ಮ ಫುಲೆ ಜನಾರೋಗ್ಯ ವಿಮೆ ಜಾರಿ ಮಾಡಿತ್ತು. "ನಾನು ಮರಾಠಿ ಭಾಷಿಕ" ಪ್ರಮಾಣಪತ್ರ ಪಡೆಯಲು ಬೆಳಗಾವಿಯಲ್ಲಿ ಐದು ಕೇಂದ್ರಗಳನ್ನು ತೆರೆಯಲಾಗಿತ್ತು. ಕನ್ನಡ ಹೋರಾಟಗಾರರ ತೀವ್ರ ವಿರೋಧದ ಹಿನ್ನೆಲೆ ಆ ಕೇಂದ್ರಗಳನ್ನು ಜಿಲ್ಲಾಡಳಿತ ಬಂದ್ ಮಾಡಿತ್ತು.
132 ಕೋಟಿ ರೂ. ವಂಚನೆ ಕೇಸ್ ಬಯಲಿಗೆ : ಸುಮಾರು 132 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಪ್ರಕರಣವನ್ನು ಕೇಂದ್ರ ಜಿಎಸ್‌ಟಿಯ ಬೆಳಗಾವಿಯ ಪ್ರಧಾನ ಕಚೇರಿಯ ಅಧಿಕಾರಿಗಳು ಭೇದಿಸಿದ್ದರು. ಆರೋಪಿ ‘ಫೆಡರಲ್ ಲಾಜಿಸ್ಟಿಕ್ಸ್ ಮಾಲೀಕ ನಕೀಬ್ ನಜೀಬ್ ಮುಲ್ಲಾ 23.82 ಕೋಟಿ ರೂ. ನಕಲಿ ಇನ್‌ಪುಟ್ ಟ್ಯಾಕ್ಟ್ ಕ್ರೆಡಿಟ್ ಒಳಗೊಂಡ 132 ಕೋಟಿ ರೂ. ಮೌಲ್ಯದ ನಕಲಿ ಜಿಎಸ್‌ಟಿ ಇನ್‌ವಾಯ್ಸ್ ರಾಕೆಟ್‌ಗಳನ್ನು ಸೃಷ್ಟಿಸಿದ್ದ. ಗ್ರಾಹಕರಿಂದ ಹಣ ಸಂಗ್ರಹಿಸಿ ಅದನ್ನು ಜಿಎಸ್‌ಟಿ ಕಚೇರಿಗೆ ಕಟ್ಟದೇ ವಂಚಿಸಿದ್ದ ಪ್ರಕರಣ ಎಲ್ಲರನ್ನು ಬೆಚ್ಚಿಬೀಳಿಸಿತ್ತು.
ಹೋಳಿಗೆ ಊಟ ಹಾಕಿಸಿದ್ದ ಅಜ್ಜಿ : ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣದಲ್ಲಿ ರಾಯಬಾಗ ತಾಲೂಕಿನ ಸುಟ್ಟಟ್ಟಿಯ ಅಜ್ಜಿ ಅಕ್ಕಾತಾಯಿ ಲಂಗೂಟಿ ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿಸಿ ಸುದ್ದಿಯಾಗಿದ್ದರು. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರಿಗೂ ಹೋಳಿಗೆ ತಿನ್ನಿಸಿ ಸಂಭ್ರಮಿಸಿದ್ದರು. ಗೃಹಲಕ್ಷ್ಮಿ ಹಣದಲ್ಲಿ ರಾಯಬಾಗ ತಾಲೂಕಿನ ಮಂಟೂರಿನ ಮಲ್ಲವ್ವ ಭೀಮಪ್ಪ ಮೇಟಿ ಗ್ರಂಥಾಲಯ ನಿರ್ಮಿಸಿದ್ದರೆ, ಬೆಳಗಾವಿಯ ಅನಗೋಳದ ಅನಿತಾ ಬಡಿಗೇರ, ತಮ್ಮ ಪತಿ ಚಂದ್ರಶೇಖರ ಅವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಇನ್ನು ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವ ಈರಪ್ಪ ಸಣ್ಣಕ್ಕಿ ಮಗನಿಗೆ ಬೈಕ್ ಕೊಡಿಸಿದ್ದರು.
ಓಮನ್ನಲ್ಲಿ ನಾಲ್ವರು ಸಜೀವ ದಹನ : ಓಮನ್ ದೇಶದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಗೋಕಾಕ್ ಮೂಲದ ಮೂವರು ಹಾಗೂ ರಾಯಚೂರು ಮೂಲದ ಒಬ್ಬರು ಸಜೀವ ದಹನವಾಗಿದ್ದರು. ಗೋಕಾಕ್ನ ವಿಜಯಾ ಮಾಯಪ್ಪ ತಹಶೀಲ್ದಾರ (58), ಪುತ್ರ ಪವನ್ ಕುಮಾರ್ (33), ಪುತ್ರಿ ಪೂಜಾ (30) ಮತ್ತು ಅಳಿಯ ರಾಯಚೂರಿನ ದೇವದುರ್ಗದ ಆದಿಶೇಷ ಬಸವರಾಜ (36) ಮೃತರು. ಮೃತ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರು.
ರಾಜ್ಯಮಟ್ಟದ ಶಿಕ್ಷಕಿ ಪ್ರಶಸ್ತಿ : ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಮರಾಠಿ ಶಾಲೆಯ ಶಿಕ್ಷಕಿ ಆಸ್ಮಾ ಇಸ್ಮಾಯಿಲ್ ನದಾಫ್, ತಾವು ದತ್ತು ಪಡೆದಿರುವ ಬೆಳಗಾವಿಯ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ. 21 ರಲ್ಲಿ ಬಡ ಮಕ್ಕಳ ಅನುಕೂಲಕ್ಕಾಗಿ ಸ್ವಂತ ಖರ್ಚಿನಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೇ ಸದ್ಯ ಕಲಿಸುತ್ತಿರುವ ಮತ್ತು ಹಿಂದೆ ಕಲಿಸಿದ ಶಾಲೆಗಳಲ್ಲೂ ಅನೇಕ ಅಭಿವೃದ್ಧಿ ಕೈಗೊಂಡಿದ್ದಾರೆ. ತಮ್ಮ ವೇತನದ ಅರ್ಧ ಭಾಗ ಈ ಕಾರ್ಯಕ್ಕೆ ಬಳಸುತ್ತಿರುವ ಇವರ ಶೈಕ್ಷಣಿಕ ಸೇವೆ ಗುರುತಿಸಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ "ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ" ಪ್ರಶಸ್ತಿ ನೀಡಿ ಗೌರವಿಸಿದೆ.
ತಾಯಿ - ಮಗನ ಜುಗಲ್ ಬಂದಿ ; ಸತತ 12 ಗಂಟೆ ಈಜಿ ದಾಖಲೆ : ಬೆಳಗಾವಿ ಈಜು ಪಟುಗಳಾದ ಜ್ಯೋತಿ ಎಸ್ ಕೋರಿ ಮತ್ತು ಅವರ ಪುತ್ರ ವಿಹಾನ್ ಎಸ್. ಕೋರಿ ಸತತ 12 ಗಂಟೆ ಈಜುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಸುವರ್ಣ ಜೆಎನ್ಎಂಸಿಯ ಈಜುಕೋಳದಲ್ಲಿ ಸ್ವಿಮ್ಮರ್ಸ್ ಕ್ಲಬ್ ಆಫ್ ಬೆಲಗಾಮ್ ಮತ್ತು ಅಕ್ವೇರಿಯಸ್ ಸ್ವಿಮ್ ಕ್ಲಬ್ ಬೆಲಗಾಮ್ ವತಿಯಿಂದ ಲಾಂಗೆಸ್ಟ್ ನಾನ್ ಸ್ಟಾಪ್ ಸ್ವಿಮ್ಮಿಂಗ್ ರಿಲೇ ಏರ್ಪಡಿಸಲಾಗಿತ್ತು. ಬೆಳಗ್ಗೆ 5 ಗಂಟೆ 8 ನಿಮಿಷಕ್ಕೆ ಆರಂಭವಾದ ರಿಲೇ ಸತತ 12 ಗಂಟೆ 22 ನಿಮಿಷಗಳ ಕಾಲ ನಡೆದಿತ್ತು. ಸಾಯಂಕಾಲ 5.30ಕ್ಕೆ ಈ ತಾಯಿ-ಮಗ ತಮ್ಮ ಯಶೋಗಾಥೆ ಪೂರ್ಣಗೊಳಿಸಿದ್ದರು. ವಿಹಾನ್ 18 ಕಿ. ಮೀ, ಜ್ಯೋತಿ 12 ಕಿ. ಮೀ. ಲೀಲಾಜಾಲವಾಗಿ ಈಜಿ ಸಂಭ್ರಮಿಸಿದ್ದರು. ಸತತ ಮಳೆಯ ನಡುವೆಯೂ ಏಷಿಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ತಮ್ಮದಾಗಿಸಿಕೊಂಡಿದ್ದರು.
ಅದ್ಧೂರಿ ಕಿತ್ತೂರು ಉತ್ಸವ : ಬ್ರಿಟಿಷರ ವಿರುದ್ಧ ವೀರರಾಣಿ ಕಿತ್ತೂರು ಚನ್ನಮ್ಮ ದಿಗ್ವಿಜಯ ಸಾಧಿಸಿದ 200ನೇ ವರ್ಷಾಚರಣೆ ಹಿನ್ನೆಲೆ ಈ ಬಾರಿಯ ಕಿತ್ತೂರು ಉತ್ಸವ 5 ಕೋಟಿ ರೂ. ಅನುದಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಸಮಾರೋಪದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಮಹಿಳೆಯರ ಬೈಕ್ ರ‍್ಯಾಲಿ ಗಮನ ಸೆಳೆದಿತ್ತು. ಅರ್ಮಾನ್ ಮಲಿಕ್ ಗಾಯನಕ್ಕೆ ಜನ ಹುಚ್ಚೆದ್ದು ಕುಣಿದಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಗೋಷ್ಠಿ ಮತ್ತು ಕುಸ್ತಿ ವಿಶೇಷವಾಗಿದ್ದವು.
ಉದ್ಯಮಿ ಸಂತೋಷ ಪದ್ಮಣ್ಣವರ ಸಾವು : ಅ.9 ರಂದು ಬೆಳಗಾವಿ ಆಂಜನೇಯ ನಗರದ ಉದ್ಯಮಿ ಸಂತೋಷ್ ಪದ್ಮಣ್ಣವರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದು ಸಹಜ ಸಾವು ಎಂದು ಮರುದಿನ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಅ.15 ರಂದು ಸಂತೋಷ್ ಅವರ ಪುತ್ರಿ ಸಂಜನಾ ಮಾಳಮಾರುತಿ ಪೊಲೀಸ್ ಠಾಣೆಗೆ ತೆರಳಿ, ತಂದೆಯ ಸಾವಿನ ಬಗ್ಗೆ ಅನುಮಾನವಿದ್ದು, ತನಿಖೆಗೆ ಆಗ್ರಹಿಸಿದ್ದರು. ಶವ ಹೊರ ತೆಗೆದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ವಿಚಾರಣೆ ನಡೆಸಿದಾಗ ಸಂತೋಷ ಪತ್ನಿ ಉಮಾ ಮೇಲೆ ಅನುಮಾನ ಬಂದಿತ್ತು. ಬಳಿಕ ಉಮಾ (41), ಅವರ ಫೇಸ್‌ಬುಕ್ ಸ್ನೇಹಿತ, ಕೊಡಗು ಜಿಲ್ಲೆಯ ಶನಿವಾರಸಂತೆ ಗ್ರಾಮದ ಶೋಭಿತ್ ಗೌಡ (30) ಮತ್ತು ಪವನ್ (27) ಅವರನ್ನು ಪೊಲೀಸರು ಬಂಧಿಸಿದ್ದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ದಿಢೀರ್ ರಾಜೀನಾಮೆ : ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ದಿಢೀರ್ ರಾಜೀನಾಮೆ ನೀಡಿದರು. ನೂತನ ಅಧ್ಯಕ್ಷರಾಗಿ ಜಾರಕಿಹೊಳಿ ಸಹೋದರರ ಆಪ್ತ ಅಪ್ಪಾಸಾಹೇಬ ಕುಲಗುಡೆ ಅಚ್ಚರಿ ರೀತಿಯಲ್ಲಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ತೀವ್ರ ನಿರಾಸೆ ಉಂಟಾಯಿತು. ಒಟ್ಟು 27 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ರಮೇಶ ಕತ್ತಿ ಇಡೀ ರಾಜ್ಯದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ದೊಡ್ಡದಾಗಿ ಬೆಳೆಸಿದ್ದರು. ಆದರೆ, ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ರಾಜೀನಾಮೆ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಶೌರ್ಯ ಇನ್ನಿಲ್ಲ: ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ 13 ವರ್ಷದ 'ಶೌರ್ಯ' ಎಂಬ ಹೆಸರಿನ ಗಂಡು ಹುಲಿ ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆಯಿತು. 2021ರಲ್ಲಿ ಬನ್ನೇರುಘಟ್ಟ ಮೃಗಾಲಯದಿಂದ ತಂದಿದ್ದ ಶೌರ್ಯನನ್ನು ಕಳೆದ ಮೂರು ವರ್ಷಗಳಿಂದ ಕಣ್ತುಂಬಿಕೊಂಡಿದ್ದರು. ಆದರೆ, ಶೌರ್ಯ ಇನ್ನು ನೆನಪು ಮಾತ್ರ.
ಪತ್ನಿ ಹೆಸರಲ್ಲಿ ಸಿಎಂ ಸಿದ್ದರಾಮಯ್ಯ ಪೂಜೆ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿ ಪಾರ್ವತಿ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ ಅರ್ಚಕರು ಮಂಗಳಾರತಿ ನೀಡಿ, ನಾಗಮೂರ್ತಿ ದೇವಿಯ ಬೆಳ್ಳಿ ಕಿರೀಟವನ್ನು ಸಿದ್ದರಾಮಯ್ಯ ಅವರ ತಲೆಗೆ ಮುಟ್ಟಿಸಿ ಆಶೀರ್ವಾದ ಮಾಡಿದರು. ಆರತಿ ಆಗುವವರೆಗೂ ದೇವಿ ಸನ್ನಿಧಾನದಲ್ಲಿ ನಿಂತು ದರ್ಶನ ಪಡೆದ ಸಿಎಂ, ತಾವೇ ಕುಂಕುಮ ಹಚ್ಚಿಕೊಂಡರು. ಈ ಹಿಂದೆ ಕುಂಕುಮ ಹಚ್ಚಲು ಯಾರಾದರೂ ಬಂದರೆ ನಿರಾಕರಿಸುತ್ತಿದ್ದರು. ಈಗ ತಾವೇ ಹಚ್ಚಿಕೊಂಡಿದ್ದು ಗಮನ ಸೆಳೆದಿತ್ತು.
ಶಿಕ್ಷಕನ ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳ ವಿಮಾನ ಪ್ರವಾಸ : ಬೆಳಗಾವಿ ತಾಲೂಕಿನ ಸೋನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ 17 ವಿದ್ಯಾರ್ಥಿಗಳನ್ನು ಶಿಕ್ಷಕ ಪ್ರಕಾಶ ದೇಯಣ್ಣವರ ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನದಲ್ಲಿ ಹೈದರಾಬಾದ್ ಪ್ರವಾಸಕ್ಕೆ ಕರೆದೊಯ್ದಿದ್ದರು. ಇದು ದೇಶದ ಗಮನವನ್ನೇ ಸೆಳೆದಿತ್ತು. 2 ಲಕ್ಷ ರೂ. ಖರ್ಚು ಮಾಡಿದ್ದ ಶಿಕ್ಷಕ ದೇಯಣ್ಣವರ ಮಕ್ಕಳಿಗೆ ರಾಮೋಜಿ ಫಿಲ್ಮ್ ಸಿಟಿ, ಚಾರ್ಮಿನಾರ್, ಗೋಲ್ಕೊಂಡ ಕೋಟೆ, ಸಲಾರ್ ಜಂಗ್ ಮ್ಯೂಸಿಯಂ ಸೇರಿ ಮತ್ತಿತರ ಪ್ರವಾಸಿಸ್ಥಳಗಳನ್ನು ತೋರಿಸಿದ್ದರು. ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ಇವರ ವಿನೂತನ ಪ್ರಯೋಗಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು.
ಸಿಇಟಿ-ಸಕ್ಷಮ ರಾಜ್ಯಕ್ಕೆ ಮಾದರಿ : ಜಿ. ಪಂ ಸಿಇಒ ರಾಹುಲ್ ಶಿಂಧೆ ಅವರು ಸರ್ಕಾರಿ ವಿಜ್ಞಾನ ಪಿಯು ವಿದ್ಯಾರ್ಥಿಗಳಿಗೆ ಹೊಚ್ಚ ಹೊಸ ಕಾರ್ಯಕ್ರಮ ಸಿಇಟಿ-ಸಕ್ಷಮ ಆರಂಭಿಸಿದ್ದರು. ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಅನುಕೂಲ ಆಗಿದೆ. ಬೇರೆ ಬೇರೆ ಜಿಲ್ಲೆಗಳಿಗೂ ಇದು ಮಾದರಿಯಾಗಿತ್ತು. ರಾಜ್ಯ ಸರ್ಕಾರವೂ ಮೆಚ್ಚುಗೆ ವ್ಯಕ್ತಪಡಿಸಿ ಬೆಳಗಾವಿ ಜಿ.ಪಂಗೆ 10 ಲಕ್ಷ ರೂ. ಅನುದಾನ ನೀಡಿದೆ.
ಪಂಚಮಸಾಲಿ ಹೋರಾಟದಲ್ಲಿ ಲಾಠಿಚಾರ್ಜ್ : ಬೆಳಗಾವಿ ಚಳಿಗಾಲ ಅಧಿವೇಶನದ ವೇಳೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಶಾಂತಿಯುತ ಪ್ರತಿಭಟನೆ ಹಿಂಸಾರೂಪ ಪಡೆಯಿತು. ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಹೋರಾಟಗಾರರರನ್ನು ಪೊಲೀಸರು ತಡೆದರು. ನೂಕಾಟ ತಳ್ಳಾಟ, ಕಲ್ಲು-ಚಪ್ಪಲಿ ತೂರಾಟವೂ ನಡೆಯಿತು. ಕೊನೆಗೆ ಪೊಲೀಸರು ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿದರು. ಗಲಾಟೆಯಲ್ಲಿ ಹಲವು ಪಂಚಮಸಾಲಿಗರು ಮತ್ತು ಪೊಲೀಸರು ಗಾಯಗೊಂಡಿದ್ದರು. ಇನ್ನೂ ಕೂಡಾ ರಾಜ್ಯ ಸರ್ಕಾರದ ವಿರುದ್ಧ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೋರಾಟ ಮುಂದುವರೆಸಿದ್ದಾರೆ.
ಹೆಬ್ಬಾಳ್ಕರ್ - ಸಿ. ಟಿ ರವಿ ಜಟಾಪಟಿ : ವಿಧಾನಪರಿಷತ್ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಸದಸ್ಯ ಸಿ. ಟಿ ರವಿ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪ ವಿಚಾರ ಅಲ್ಲೋಲ-ಕಲ್ಲೋಲ ಸೃಷ್ಟಿಸಿತು. ಇದರಿಂದ ರೊಚ್ಚಿಗೆದ್ದ ಹೆಬ್ಬಾಳ್ಕರ್ ಬೆಂಬಲಿಗರು ಸೌಧದೊಳಗೆ ರವಿ ಅವರ ಮೇಲೆ ಹಲ್ಲೆಗೂ ಮುಂದಾದರು. ಘಟನೆ ಖಂಡಿಸಿ ಬಿಜೆಪಿಗರು ಸೌಧದ ಮುಂದೆ ಧರಣಿ ಕುಳಿತರು. ಬಳಿಕ ಹೆಬ್ಬಾಳ್ಕರ್ ಅವರು ನೀಡಿದ ದೂರಿನ ಮೇರೆಗೆ ರವಿ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಈ ಕ್ರಮ ತನ್ನ ಕೊಲೆಗೆ ನಡೆದ ಸಂಚು ಎಂದು ರವಿ ಆರೋಪಿಸಿದರು. ಇಡೀ ರಾತ್ರಿ ಪೊಲೀಸರು ರವಿ ಅವರನ್ನು ಸುತ್ತಾಡಿಸಿ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇದೇ ವೇಳೆ ಬೆಳಗಾವಿಯಿಂದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಯಾಯಿತು. ದಾರಿ ಮಧ್ಯದಲ್ಲೇ ಇರುವಾಗ ಹೈಕೋರ್ಟ್ ಸಿ. ಟಿ ರವಿ ಅವರಿಗೆ ಜಾಮೀನು ನೀಡಿ ಆದೇಶ ಹೊರಡಿಸಿತ್ತು. ಒಟ್ಟಾರೆ ವಿಧಾನಸೌಧದಲ್ಲಿ ನಡೆದ ಘಟನೆ ಬಿಜೆಪಿ-ಕಾಂಗ್ರೆಸ್ ನಾಯಕರ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದು, ಅದು ಇನ್ನು ಮುಂದುವರೆದಿದೆ.
ವೀರಸೌಧದಲ್ಲಿ ಸಿಡಬ್ಲುಸಿ ಸಭೆ : 1924ರ ಡಿ. 26, 27ರಂದು ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಹಿನ್ನೆಲೆ ವೀರಸೌಧದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಿಡಬ್ಲುಸಿ ಸಭೆ ನಡೆಯಿತು. ಸಭೆಗೆ ಹಲವು ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಪಾಲ್ಗೊಂಡಿದ್ದರು. ಇನ್ನು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ದೆಹಲಿಯಲ್ಲಿ ನಿಧನರಾದ ಪರಿಣಾಮ ಸಿಪಿಎಡ್ ಮೈದಾನದಲ್ಲಿ ನಡೆಯಬೇಕಿದ್ದ ಬೃಹತ್ ಸಾರ್ವಜನಿಕ ಸಮಾವೇಶ ರದ್ದಾಯಿತು. ಅದೇ ವೇದಿಕೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶತಮಾನದ ಬೆಳಕು : ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅವಿಸ್ಮರಣೀಯಗೊಳಿಸಲು ಬೆಳಗಾವಿಯಲ್ಲಿ ಬೆಳಕಿನ ಸ್ವರ್ಗವೇ ಸೃಷ್ಟಿಯಾಗಿತ್ತು. ಮೈಸೂರು ದಸರಾವನ್ನು ನೆನಪಿಸಿತು. ಅಂದಾಜು 8 ಕೋಟಿ ರೂ. ವೆಚ್ಚದಲ್ಲಿ ಒಟ್ಟು 104 ಕಿ.ಮೀ 90 ವೃತ್ತಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದವು. 70 ಮಹಾಪುರುಷರ, ಐತಿಹಾಸಿಕ ಸ್ಮಾರಕ, ಮಂದಿರ, ದೇವಾನುದೇವತೆಗಳ ವಿದ್ಯುತ್ ಪ್ರತಿಕೃತಿ ಮಾದರಿಗಳು ಎಲ್ಲರನ್ನು ಆಕರ್ಷಿಸಿದವು. ಶತಮಾನದ ಬೆಳಕಿನಲ್ಲಿ ಕುಂದಾನಗರಿ ಮಿರಿ ಮಿರಿ ಮಿಂಚಿತು. ಲಕ್ಷಾಂತರ ಜನರು ಈ ಬೆಳಕಿನ ವೈಭವ ಕಣ್ತುಂಬಿಕೊಂಡು ಸಂಭ್ರಮಿಸಿದರು.
ತಹಶೀಲ್ದಾರ್ ಕಚೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ : ಬೆಳಗಾವಿ ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ್ (35) ತಹಶೀಲ್ದಾರ್ ಕೊಠಡಿಯಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದರು. ‘ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ ನಾಗರಾಳ, ಇನ್ನೊಬ್ಬ ಅಧಿಕಾರಿ ಅಶೋಕ ಕಬ್ಬಲಿಗೇರ ಮತ್ತು ಸೋಮು ಎಂಬ ವ್ಯಕ್ತಿಯೇ ನೇರ ಕಾರಣ. ನಮ್ಮ ಕಚೇರಿಯಲ್ಲಿ ತುಂಬ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಹೋರಾಡಿ’ ಎಂದು ಸಾವಿನ ಹಿಂದಿನ ದಿನ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳ ವಾಟ್ಸ್‌ಆ್ಯಪ್ ಗ್ರೂಪಿನಲ್ಲಿ ಸಂದೇಶ ಹಾಕಿದ್ದರು. ಸೋಮು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕ. ಈ ಪ್ರಕರಣದಲ್ಲಿ ಹೆಬ್ಬಾಳ್ಕರ್ ಅವರು ರಾಜೀನಾಮೆ ನೀಡುವಂತೆ ಬಿಜೆಪಿ ಒತ್ತಾಯಿಸಿತ್ತು.
ಬೆಳಗಾವಿಯ ಎಸ್‌ಪಿಎಂ ರಸ್ತೆಯಿಂದ ಹಳೇ ಪಿ. ಬಿ ರಸ್ತೆಯವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೇ, 5.88 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಪರಿಹಾರಕ್ಕಾಗಿ ಭೂಮಾಲೀಕ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಕೋರ್ಟ್ ಆದೇಶದಂತೆ ಭೂಮಾಲೀಕರು ರಸ್ತೆ ಬಂದ್ ಮಾಡಿದ್ದರು. ನಂತರ ಪರಿಹಾರ ವಿತರಿಸಲು 20 ಕೋಟಿ ಠೇವಣಿ ಇಡುವಂತೆ ಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು. ಪಾಲಿಕೆಗೆ ಆರ್ಥಿಕ ಸಂಕಷ್ಟ ಹಿನ್ನೆಲೆ ಭೂಮಾಲೀಕರಿಗೆ ಅವರ ಜಾಗವನ್ನು ಪಾಲಿಕೆ ಹಸ್ತಾಂತರಿಸಿತ್ತು. ಅಧಿಕಾರಿಗಳ ಯಡವಟ್ಟಿಗೆ ಬೆಳಗಾವಿ ಜನ ಹಿಡಿಶಾಪ ಹಾಕಿದ್ದರು.
ರೈತರನ್ನು ಕಾಡಿದ ವರುಣ : ಈ ಬಾರಿಯೂ ಜಿಲ್ಲೆಯ ರೈತರ ಪಾಲಿಗೆ 2024 ಸಂಕಷ್ಟ ತಂದೊಡ್ಡಿದ ವರ್ಷವಾಯಿತು. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಪ್ರಮಾಣ ಜಿಲ್ಲೆಯಲ್ಲಿ ಕುಂಠಿತಗೊಳ್ಳುವಂತಾಯಿತು. ಆದರೆ, ಸೆಪ್ಟೆಂಬರ್ನಲ್ಲಿ ಸುರಿದ ಮಳೆ ರೈತರನ್ನು ಕಂಗೆಡುವಂತೆ ಮಾಡಿತು. ಜಿಲ್ಲೆಯ ಸಪ್ತನದಿಗಳ ಪ್ರವಾಹದಿಂದಾಗಿ ರಸ್ತೆಗಳು ಸಂಪರ್ಕ ಕಳೆದುಕೊಂಡಿದ್ದವು. ಅಷ್ಟೇ ಏಕೆ, ಕೆಲವು ಪ್ರದೇಶಗಳಲ್ಲಿ ಕೈಗೆ ಬಂದಿದ್ದ ಬೆಳೆ ಸಂಪೂರ್ಣ ನಾಶವಾಯಿತಲ್ಲದೇ, ಚಿಕ್ಕೋಡಿ, ಗೋಕಾಕ್ ಭಾಗದಲ್ಲಿ ನೆರೆ ಹಾವಳಿಗೆ ನಲುಗಿ ಹಲವಾರು ಸಂತ್ರಸ್ತರು ಗಂಜಿ ಕೇಂದ್ರಗಳಲ್ಲಿ ಕೆಲ ದಿನಗಳ ಕಾಲ ಆಶ್ರಯ ಪಡೆದಿದ್ದರು.