ಚಂದನವನದ ಜನಪ್ರಿಯ ತಾರಾ ದಂಪತಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ತಮ್ಮ ಮದುವೆ ವಾರ್ಷಿಕೋತ್ಸವದಂದೇ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಈ ಶುಭ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಪಾಪ್ಯುಲರ್ ಕಪಲ್ಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.
ತುಂಬು ಗರ್ಭಿಣಿಯಾಗಿದ್ದ ನಟಿ ಹರಿಪ್ರಿಯಾ ಹೆರಿಗೆಗಾಗಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮಗು ಜನನದ ಸುದ್ದಿ ತಿಳಿದುಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದರು. ಫೈನಲಿ, ಜನವರಿ 27ರ ಸಂಜೆ ಶುಭ ಸುದ್ದಿ ಸಿಕ್ಕಿದೆ. ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮೊದಲ ಮಗುವಿನ ಆಗಮನದಿಂದ ತಾರಾ ದಂಪತಿ ನಿವಾಸದಲ್ಲೀಗ ಸಂಭ್ರಮದ ವಾತಾವರಣ ಮನೆಮಾಡಿದೆ. ಸ್ಟಾರ್ ಕಪಲ್ ಈ ಗುಡ್ ನ್ಯೂಸ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ವಿವಾಹ ವಾರ್ಷಿಕೋತ್ಸವ ದಿನದಂದೇ ಮಗ ಆಗಮಿಸಿದ್ದು ಖುಷಿ ತಂದಿದೆ ಎಂದು ತಿಳಿಸಿದ್ದಾರೆ.
ಮೊದಲಿನಿಂದಲೂ ಈ ಚಂದನವನದ ತಾರಾ ದಂಪತಿ ಸಿಂಹ, ಸಿಂಹಪ್ರಿಯಾ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಾರೆ. ಇದೀಗ ಮಗನ ಆಗಮನದ ಖುಷಿ ವಿಚಾರವನ್ನು ಹಂಚಿಕೊಳ್ಳಲು ಸಹ ಮರಿಸಿಂಹನ ಪೋಸ್ಟರ್ ಬಳಸಿದ್ದಾರೆ. ಮೂರು ಸಿಂಹಗಳ ಪೋಸ್ಟರ್ ಇದಾಗಿದ್ದು, ಪೋಷಕ ಸಿಂಹಗಳ ಜೊತೆಗೆ ಮುದ್ದಾದ ಮರಿಸಿಂಹವೂ ಇದೆ. 'ಅವನು ನಮ್ಮ ಮದುವೆಯ ದಿನದಂದೇ ಬಂದ' ಎಂದು ಪೋಸ್ಟ್ಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಬಹಳ ವಿಭಿನ್ನವಾಗಿ ಗುಡ್ ನ್ಯೂಸ್ ಹಂಚಿಕೊಂಡ್ರಿ ಎಂದು ಅಭಿಮಾನಿಗಳು ಅಭಿಪ್ರಾಯ ತಿಳಿಸಿದ್ದಾರೆ. ಜೊತೆಗೆ ಅಭಿನಂದನೆಗಳ ಮಳೆ ಸುರಿಸಿದ್ದಾರೆ.