ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಸಿಲುಕಿಕೊಂಡಿದೆ. ದರ್ಶನ್, ಸ್ನೇಹಿತೆ ಪವಿತ್ರಾ ಗೌಡ ಸೇರಿ ಈವರೆಗೆ 18 ಮಂದಿ ಅರೆಸ್ಟ್ ಆಗಿ ವಿಚಾರಣೆ ಮುಂದುವರಿದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ್ಯಾರೂ ಕೂಡ ಮಾತನಾಡುತ್ತಿಲ್ಲವೆಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ತಾರೆಯರು ಒಬ್ಬೊಬ್ಬರಾಗೇ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ, ದರ್ಶನ್ ಜೊತೆ ಬುಲ್ ಬುಲ್, ಅಂಬರೀಶ್, ಕ್ರಾಂತಿ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದ ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರಚಿತಾ ರಾಮ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಅದಕ್ಕೆ, 'ಧರ್ಮೋ ರಕ್ಷತಿ ರಕ್ಷಿತಃ' ಎಂಬ ಕ್ಯಾಪ್ಷನ್ ಅನ್ನೂ ಕೊಟ್ಟಿದ್ದಾರೆ. ಪೋಸ್ಟ್ನಲ್ಲಿ, ''ನಮಸ್ಕಾರ. ಈ ನೋಟ್ ಅನ್ನು ನಾನು ನಟಿಯಾಗಿ ಅಲ್ಲ, ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ಇತ್ತೀಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು! ಮೊದಲನೆಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆ ನನಗಿದೆ. ಇನ್ನು, ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್ ಸರ್ ನನಗೆ ಗುರು ಸಮಾನರು, ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದನ್ನು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಏನಿದ್ದರೂ ಸತ್ಯ ಪೊಲೀಸ್ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾರದರ್ಶಕವಾಗಿರುತ್ತೀರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತೀರಿ ಎಂದು ಆಶಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ದರ್ಶನ್ ಪ್ರಕರಣದ ಬಗ್ಗೆ ನಿರ್ಮಾಪಕ ಉಮಾಪತಿ ಹೇಳಿದ್ದೇನು? - Umapathy on Darshan case