ಸಿನಿಮಾ ಎಂಬ ಗ್ಲ್ಯಾಮರ್ ಪ್ರಪಂಚದಲ್ಲಿ ಸಕ್ಸಸ್ ಆಗಬೇಕಂದ್ರೆ ಪ್ರತಿಭೆ, ಶ್ರಮ ಮತ್ತು ಅದೃಷ್ಟ ತುಂಬಾನೇ ಮುಖ್ಯ. ಈ ಸಾಲಿನಲ್ಲಿ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ ಇದ್ದಾರೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಇವರೂ ಕೂಡ ಒಬ್ಬರು. ಮಹಿರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚೈತ್ರಾ ಆಚಾರ್ ಅವರೀಗ ಟ್ರೋಲ್ ಮಾಡುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಚೈತ್ರಾ ಆಚಾರ್ ಟೋಬಿ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 'ಬ್ಲಿಂಕ್' ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ವಿಮರ್ಶಕರು ಚಿತ್ರದ ಬಗ್ಗೆ ಒಳ್ಳೆ ಮಾತುಗಳನ್ನಾಡಿದ್ದಾರೆ.
ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಖತ್ ಆ್ಯಕ್ಟೀವ್ ಆಗಿರುವ ಚೈತ್ರಾ ಆಚಾರ್ ಆಗಾಗ್ಗೆ ತಮಗಿಷ್ಟವಾದ ಕಾಸ್ಟ್ಯೂಮ್ಗಳಲ್ಲಿ ಫೋಟೋಶೂಟ್ ಮಾಡಿಸಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ, ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನೇ ದುರುಪಯೋಗಪಡಿಸಿಕೊಂಡು, ಕೆಲವರು ಟ್ರೋಲ್ ಹೆಸರಿನಲ್ಲಿ ತಮ್ಮ ಆಟ ಶುಟು ಮಾಡುತ್ತಾರೆ. ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡಿ ಅವರ ಕಮೆಂಟ್ ಸೆಕ್ಷನ್ಗೆ ಬಂದು ಕೆಟ್ಟ ಮಾತುಗಳನ್ನಾಡುತ್ತಾರೆ. ಕೆಲವೊಮ್ಮೆ ಕೆಲವರ ಅತಿರೇಖದ ಮಾತುಗಳು ಕಲಾವಿದರ ಬದುಕನ್ನು ಹಿಂಡಿ ಹಿಪ್ಪೆಯಾಗಿಸಿಬಿಡುತ್ತದೆ. ಖಿನ್ನತೆಗೆ ದೂಡುತ್ತದೆ. ನಟಿ ಚೈತ್ರಾ ಆಚಾರ್ ಬದುಕಿನಲ್ಲಿಯೂ ಇಂಥಹದ್ದೊಂದು ದಿನ ಎದುರಾಗಿತ್ತು. ಮಾತು ಮನೆ ಕೆಡಿಸಿತು ಎನ್ನುವಂತೆ ಅದೆಲ್ಲೋ ಕುಳಿತು ಮಾತನಾಡಿದ ವ್ಯಕ್ತಿಯ ಮಾತು ಚೈತ್ರಾಗೆ ಮಾನಸಿಕ ಆಘಾತವನ್ನುಂಟು ಮಾಡಿತ್ತು.
ಚೈತ್ರಾ ಆಚಾರ್ ನಾಯಕಿ ಕಂ ಗಾಯಕಿ. ಇವರು ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ. ಎಂಥ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲ ಸಾಮರ್ಥ್ಯ ಹೊಂದಿರುವ ನಟಿ ಇವರು. ಇದಕ್ಕೆ ಇತ್ತೀಚಿನ ಉದಾಹರಣೆ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ'. ಯಾರ ಬಳಿಯೂ ಅಭಿನಯದ ಅಕ್ಷರಭ್ಯಾಸ ಮಾಡದೇ, ಯಾವ ಗಾಡ್ ಫಾದರ್ ಇಲ್ಲದೇ, ಕನ್ನಡ ಚಿತ್ರರಂಗಕ್ಕೆ ಬಂದು ತನ್ನ ಕಾಲ ಮೇಲೆ ನಿಂತಿರುವ ಚೈತ್ರಾ ಆಚಾರ್ 2021ರಲ್ಲಿ ಗರುಡ ಗಮನ ವೃಷಭ ವಾಹನ ಚಿತ್ರದ ಸೋಜುಗಾದ ಸೂಜಿ ಮಲ್ಲಿಗೆ ಹಾಡಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಅದು ಕೂಡಾ ಸೈಮಾ ಅಂಥಹ ದೊಡ್ಡ ವೇದಿಕೆಯಲ್ಲಿ.
ಇದು ಚೈತ್ರಾ ವೃತ್ತಿ ಜೀವನದ ಮೊದಲ ಬಹುದೊಡ್ಡ ಪ್ರಶಸ್ತಿ. ಹೀಗಾಗಿ ಇದು ಕನಸಾ, ನನಸಾ ಎಂಬ ಗೊಂದಲ ಚೈತ್ರಾ ಅವರಲ್ಲಿತ್ತು. ದೊಡ್ಡ ವೇದಿಕೆ, ದೊಡ್ಡ ಸಮಾರಂಭ, ಗಣ್ಯ ವ್ಯಕ್ತಿಗಳು ಎಂಬ ಕಾರಣದಿಂದ ಚೈತ್ರಾ ಎಕ್ಸೈಟ್ಮೆಂಟ್ ಕೂಡ ಹೆಚ್ಚಿತ್ತು. ಆದರೆ ಈ ಎಲ್ಲಾ ಸಂಭ್ರಮ, ಸಡಗರಕ್ಕೆ ಕೊಳ್ಳಿ ಇಟ್ಟಿದ್ದು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ಕೆಲ ಅಭಿಪ್ರಾಯಗಳು.
ಹೌದು, ತಮ್ಮ ಸಿನಿಪ್ರಯಾಣದ ಮೊದಲ ದೊಡ್ಡ ಪ್ರಶಸ್ತಿ ಸಮಾರಂಭಕ್ಕೆ ಸಾಕ್ಷಿಯಾಗಲು, ಚೈತ್ರಾ ವಿಶೇಷವಾದ ಡಿಸೈನರ್ ಬಟ್ಟೆಯನ್ನು ತೊಟ್ಟಿದ್ದರು. ಈ ಔಟ್ಫಿಟ್ ತುಸು ಬೋಲ್ಡ್ ಆಗಿಯೇ ಇತ್ತು. ಈ ಕಾರ್ಯಕ್ರಮದಲ್ಲಿ ಚೈತ್ರಾಗೆ ಪ್ರಶಸ್ತಿ ಬಂದಿದ್ದು ಗಾಯನ ವಿಭಾಗದಲ್ಲಿ. ಈ ಕಾರಣಕ್ಕೆ 'ಸೈಮಾ' ನಿರೂಪಣೆ ಮಾಡುತ್ತಿದ್ದ ವಿನಾಯಕ್ ಜೋಶಿ ಸೋಜುಗಾದ ಹಾಡನ್ನು ಹಾಡುವ ಬೇಡಿಕೆ ಇಟ್ಟಿದ್ದರು. ಚೈತ್ರಾ ಹಾಡಿದ್ದರು ಕೂಡ.