ಪತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ "ಗೌರಿ" ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂದ್ರಜಿತ್ ಲಂಕೇಶ್ ಅವರೇ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗೆ ಬಸವನಗುಡಿಯ ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ, ಸಾವಿರಾರು ವಿದ್ಯಾರ್ಥಿಗಳ ಸಮ್ಮಖದಲ್ಲಿ "ಗೌರಿ" ಚಿತ್ರದ ಮೊದಲ ಹಾಡು ಅನಾವರಣಗೊಂಡಿತು.
ಇಂದ್ರಜಿತ್ ಲಂಕೇಶ್, ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್, ಅವಿನಾಶ್, ವಿಷ್ಣು ಸೆರಿದಂತೆ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿಜಯ್ ಈಶ್ವರ್ ಬರೆದಿರುವ "ಟೈಮ್ ಬರುತ್ತೆ" ಎಂಬ ಹಾಡು ಈ ಚಿತ್ರದ ಚೊಚ್ಚಲ ಗೀತೆಯಾಗಿ ಬಿಡುಗಡೆಯಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿ, ಹಾಡಿದ್ದಾರೆ. ಯವಜನತೆಗೆ ಹತ್ತಿರವಾಗಿರುವ ಈ ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
ಹಾಡು ಬಿಡುಗಡೆಯ ನಂತರ ಮಾತನಾಡಿದ ನಿರ್ಮಾಪಕ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಇಂದು ಗೌರಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿವೆ. ಐವರು ಸಂಗೀತ ನಿರ್ದೇಶಕರು ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಭಾರತದ 12ಕ್ಕೂ ಅಧಿಕ ಹೆಸರಾಂತ ಗಾಯಕರು ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಇದೀಗ ಚಂದನ್ ಶೆಟ್ಟಿ ಸಂಗೀತ ನೀಡಿ ಹಾಡಿರುವ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿದೆ. ಇದರ ಜೊತೆಗೆ ಈ ಹಾಡಿಗೆ ನಾಯಕ ಸಮರ್ಜಿತ್, ನಾಯಕಿ ಸಾನ್ಯಾ ಅಯ್ಯರ್ ಹಾಗೂ ನಟಿ ಸಂಯುಕ್ತ ಹೆಗಡೆ ರೀಲ್ಸ್ ಕೂಡ ಮಾಡಿದ್ದಾರೆ. ಹಾಡಿನ ಲಿರಿಕಲ್ ವಿಡಿಯೋ ಹಾಗೂ ರೀಲ್ಸ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉಳಿದ ಹಾಡುಗಳು ಶೀಘ್ರದಲ್ಲೇ ಅನಾವರಣವಾಗಲಿವೆ. ಜೊತೆಗೆ ಆದಷ್ಟು ಬೇಗ ಚಿತ್ರವನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಯುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.