ಸಮಂತಾ ರುತ್ ಪ್ರಭು, ದಕ್ಷಿಣ ಚಿತ್ರರಂಗದ ಖ್ಯಾತ ನಟಿಯರಲ್ಲೊಬ್ಬರು ಕೊನೆಯದಾಗಿ, ಖುಷಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2023ರ ಸೆಪ್ಟೆಂಬರ್ 1ರಂದು ತೆರೆಕಂಡ ಈ ಚಿತ್ರ ಯಶಸ್ವಿ ಆಗಿತ್ತು. ಅದಾದ ಬಳಿಕ ನಟಿಯ ಯಾವುದೇ ಚಿತ್ರಗಳು ಬಿಡುಗಡೆ ಆಗಿಲ್ಲ. ಹೊಸ ಸಿನಿಮಾಗಳು ಕೂಡ ಘೋಷಣೆಯಾಗಿಲ್ಲ.
ಮಯೋಸಿಟಿಸ್ ಹಿನ್ನೆಲೆ, ವಿರಾಮದಲ್ಲಿದ್ದ ಸಮಂತಾ ರುತ್ ಪ್ರಭು ಶೀಘ್ರದಲ್ಲೇ ಸಿನಿಮಾ ಪ್ರಾರಂಭಿಸಲಿದ್ದು, ಸದ್ಯ ಪಾಡ್‌ಕಾಸ್ಟ್ ಮೂಲಕ ತಮ್ಮ ಕೆಲಸ ಆರಂಭಿಸಿದ್ದಾರೆ. ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ತಮ್ಮ ಸಿನಿಪಯಣ ಮೆಲುಕುಹಾಕಿದರು. ಈ ವೇಳೆ, ನಟಿಯ ರೋಲ್ ಮಾಡೆಲ್ ಬಗ್ಗೆ ಕೇಳಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಮಂತಾ, ಅಲ್ಲು ಅರ್ಜುನ್ ನನ್ನ ಸ್ಫೂರ್ತಿಯ ಮೂಲ ಎಂಬುದಾಗಿ ಬಹಿರಂಗಪಡಿಸಿದರು. ತೆರೆ ಮೇಲಿನ ಅವರ ಬಹುಮುಖ ಪ್ರತಿಭೆ ಮತ್ತು ಕಲೆ ಮೇಲೆ ಅವರ ಸಮರ್ಪಣೆಯನ್ನು ನಟಿ ಶ್ಲಾಘಿಸಿದರು.
ಈ ಹಿಂದೆ ಸಮಂತಾ, ಅಲ್ಲು ಅರ್ಜುನ್ ಜೊತೆ ಎರಡು ಬಾರಿ ಕಾಣಿಸಿಕೊಂಡಿದ್ದಾರೆ. 2015ರ ಸನ್ ಆಫ್ ಸತ್ಯಮೂರ್ತಿ ಮತ್ತು ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ಪುಷ್ಪ: ದಿ ರೈಸ್‌ನ ಪಾಪ್ಯುಲರ್ ಸಾಂಗ್ ಊ ಅಂಟಾವದಲ್ಲಿ ಕಾಣಿಸಿಕೊಂಡಿದ್ದರು. ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬುವ ನಟನ ನಟನಾ ಸಾಮರ್ಥ್ಯವನ್ನು ಸಮಂತಾ ಕೊಂಡಾಡಿದ್ದಾರೆ. ಅಲ್ಲು ಅರ್ಜುನ್ನನ್ನು "acting beast'' ಎಂದು ಉಲ್ಲೇಖಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಮಾರ್ಗದರ್ಶನಕ್ಕಾಗಿ ಅಲ್ಲು ಅರ್ಜುನ್ ಕಡೆ ನೋಡುವುದಾಗಿ ಬಹಿರಂಗಪಡಿಸಿದ್ದಾರೆ.