ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಸಮೀಪ ಕೆಲವು ತಿಂಗಳ ಹಿಂದೆ ನಡೆದ ಗುಂಡಿನ ದಾಳಿ ಪ್ರಕರಣದ ಕುರಿತು ಮಹತ್ವದ ಮಾಹಿತಿ ಲಭ್ಯವಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರು ಸಲ್ಮಾನ್ ಅವರನ್ನು ಪಂಜಾಬ್ ಗಾಯಕ ಸಿಧು ಮೂಸೆವಾಲ ಅವರಂತೆ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಅಂಶವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಮುಂಬೈನ ಪನ್ವೇಲ್ ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಈ ಕುರಿತ ಉಲ್ಲೇಖಗಳಿವೆ.
ಕಳೆದ ವಾರ ಪನ್ವೇಲ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪೊಲೀಸರು 350 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಮೊಬೈಲ್ ಫೋನ್‌ಗಳ ವಿವರ, ವಾಟ್ಸ್‌ಆ್ಯಪ್ ಗುಂಪುಗಳು, ಟವರ್ ಲೊಕೇಶನ್‌ಗಳು ಹಾಗೂ ಪ್ರತ್ಯಕ್ಷದರ್ಶಿಗಳ ಆಡಿಯೋ, ವಿಡಿಯೋ ಕರೆಗಳ ತನಿಖೆಯ ಸಂಪೂರ್ಣ ವಿಶ್ಲೇಷಣೆಯನ್ನು ಪೊಲೀಸರು ನಡೆಸಿದ್ದಾರೆ. ಪಾಕಿಸ್ತಾನದಿಂದ ತಂದಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಸಲ್ಮಾನ್ ಅವರನ್ನು ಕೊಲ್ಲಲು ಯೋಜನೆ ರೂಪಿಸಲಾಗಿತ್ತು ಎಂಬ ಆಘಾತಕಾರಿ ವಿಚಾರಗಳು ಚಾರ್ಜ್‌ಶೀಟ್‌ನಲ್ಲಿವೆ.
ಬಿಷ್ಣೋಯ್ ಗ್ಯಾಂಗ್‌ನ ಐವರು ಸದಸ್ಯರು:ಧನಂಜಯ್ ತಾಪ್ಸಿಂಗ್ ಅಲಿಯಾಸ್ ಅಜಯ್ ಕಶ್ಯಪ್ (28), ಗೌತಮ್ ವಿನೋದ್ ಭಾಟಿಯಾ (29), ವಾಸ್ಪಿ ಮಹಮೂದ್ ಖಾನ್ ಅಲಿಯಾಸ್ ಚೀನಾ (36), ರಿಜ್ವಾನ್ ಹಸನ್ ಅಲಿಯಾಸ್ ಜಾವೇದ್ ಖಾನ್ (25) ಮತ್ತು ದೀಪಕ್ ಹವಾಸಿಂಗ್ ಅಲಿಯಾಸ್ ಜಾನ್ ವಾಲ್ಮೀಕಿ (30) ಸಲ್ಮಾನ್ ಹತ್ಯೆಗೆ ಸಂಚು ರೂಪಿಸಿದ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಪಿತೂರಿ, ಪ್ರಚೋದನೆ (ಐಪಿಸಿ ಸೆಕ್ಷನ್ 115) ಮತ್ತು ಕ್ರಿಮಿನಲ್ ಬೆದರಿಕೆ (ಐಪಿಸಿ ಸೆಕ್ಷನ್ 506 (2) ಗಳಂಥ ಆರೋಪಗಳನ್ನು ಹೊರಿಸಲಾಗಿದೆ.