ಮುಂಬೈ (ಮಹಾರಾಷ್ಟ್ರ):ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ಮುಂದುವರೆದಿದೆ. ಈ ಪ್ರಕರಣದಲ್ಲಿ ಈವರೆಗೆ 5 ಮಂದಿಯನ್ನು ಬಂಧಿಸಲಾಗಿದೆ. ಐವರು ಆರೋಪಿಗಳ ಪೈಕಿ ಅನುಜ್ ಥಾಪನ್ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಟ್ಟಾರೆ, ಅನುಜ್ ಥಾಪನ್ ಆತ್ಮಹತ್ಯೆ, ಗುಂಡಿನ ದಾಳಿ ಪ್ರಕರಣದ ತನಿಖೆ ಸಾಗಿದ್ದು, ಇದೀಗ ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಸೋಮಿ ಅಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ಮನೆ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದ ಬಗ್ಗೆ ನಟಿ ಸೋಮಿ ಅಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನನ್ನ ಶತ್ರುವಿಗೂ ಹೀಗಾಗಲಿ ಎಂದು ನಾನು ಬಯಸುವುದಿಲ್ಲ. ಯಾರೂ ಆ ಪರಿಸ್ಥಿತಿ ಎದುರಿಸಬಾರದು. ನನ್ನ ಪ್ರಾರ್ಥನೆಗಳು ಸಲ್ಮಾನ್ ಅವರೊಂದಿಗಿವೆ. ಹಿಂದೆ ಏನೇ ನಡೆದಿದ್ದರೂ, ಪ್ರಸ್ತುತ ಅವು ಮಹತ್ವದ್ದಲ್ಲ. ಹಿಂದಿನ ವಿಚಾರಗಳು ಗತಕಾಲದಂತಿರಲಿ. ಸಲ್ಮಾನ್ ಆಗಿರಲಿ, ಶಾರುಖ್ ಆಗಿರಲಿ ಅಥವಾ ನನ್ನ ನೆರೆಹೊರೆಯವರಾಗಿರಲಿ ಯಾರಿಗೂ ಹೀಗಾಗಬಾರದು ಎಂದು ತಿಳಿಸಿದ್ದಾರೆ.
ಸಮಸ್ಯೆ ಏನೇ ಇರಲಿ ಕಾನೂನು ಕ್ರಮಗಳಿವೆ. ಅದೇ ಜೀವಕ್ಕೆ ತೊಂದರೆ ಕೊಡುವುದು ಸ್ವೀಕಾರ್ಹವಲ್ಲ. ಸಲ್ಮಾನ್ ಅಥವಾ ಅವರ ಕುಟುಂಬ ಯಾವುದೇ ತೊಂದರೆ ಎದುರಿಸಬೇಕೆಂದು ನಾನೆಂದಿಗೂ ಬಯಸುವುದಿಲ್ಲ. ನಾನು ಮತ್ತು ನನ್ನ ತಾಯಿ ಅವರಿಗೆ ಶುಭ ಹಾರೈಸುತ್ತೇನೆ. ಸುರಕ್ಷತೆಗೆ ಪ್ರಾರ್ಥನೆ ಮಾಡುತ್ತೇವೆ. ಒಟ್ಟಾರೆ ಘಟನೆ ಬಗ್ಗೆ ನಾವು ಆಘಾತಕ್ಕೊಳಗಾಗಿದ್ದೇವೆ. ಸಲ್ಮಾನ್‌ನೊಂದಿಗೆ ಹೀಗಾಗಬಾರದಿತ್ತು ಎಂದು ತಿಳಿಸಿದ್ದಾರೆ.