ಹೈದರಾಬಾದ್: ಭಾನುವಾರ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಲ್ಲಿ ಒಬ್ಬ ಗುರುಗ್ರಾಮದವನು ಎಂದು ಶಂಕಿಸಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಸಲ್ಮಾನ್ ಖಾನ್ರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಮುಂಜಾನೆ 4:50 ರಿಂದ 5 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ತನಿಖೆಯಲ್ಲಿ ಸಿಸಿಟಿವಿ ಪರಿಶೀಲಿಸಿದ್ದು, ಒಬ್ಬ ಆರೋಪಿ ಹರಿಯಾಣ ರಾಜ್ಯದ ಗುರುಗ್ರಾಮಕ್ಕೆ ಸೇರಿದವನೆಂದು ಶಂಕಿಸಲಾಗಿದೆ.
ಬಾಂದ್ರಾ ಪೊಲೀಸ್ ಅಧಿಕಾರಿಯ ನೀಡಿರುವ ಮಾಹಿತಿ ಪ್ರಕಾರ, ಐಪಿಸಿ ಸೆಕ್ಷನ್ 307 (ಹತ್ಯೆ ಯತ್ನ)ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ 'ಅಪರಿಚಿತ ವ್ಯಕ್ತಿಗಳ' ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇಬ್ಬರಲ್ಲಿ ಒಬ್ಬರು ಹರಿಯಾಣದಲ್ಲಿ ಹಲವು ಕೊಲೆ ಮತ್ತು ದರೋಡೆಗಳಲ್ಲಿ ಭಾಗಿಯಾಗಿರುವ ಗುರುಗ್ರಾಮ್ನ ಕ್ರಿಮಿನಲ್ ಎಂದು ಶಂಕಿಸಲಾಗಿದೆ. ಅಲ್ಲದೇ ಮಾರ್ಚ್‌ನಲ್ಲಿ ನಡೆದ ಗುರುಗ್ರಾಮ ಮೂಲದ ಉದ್ಯಮಿ ಸಚಿನ್ ಮುಂಜಾಲ್ ಹತ್ಯೆಯಲ್ಲಿ ಬೇಕಾದ ಪ್ರಮುಖ ಆರೋಪಿ ಎಂದು ದೆಹಲಿ ಪೊಲೀಸರನ್ನು ಉಲ್ಲೇಖಿಸಿ ಅಧಿಕೃತ ಮೂಲಗಳು ತಿಳಿಸಿವೆ.