ಮೈಸೂರು: "ಕನ್ನಡ ಭಾಷೆ ಸಮೃದ್ಧವಾಗಿ ಮತ್ತು ಶ್ರೀಮಂತವಾಗಿ ಬೆಳೆಯುತ್ತಿದೆ. ಇಂದು ಕನ್ನಡ ಕಾವ್ಯ, ಕವನ, ನಾಟಕ, ಕಾದಂಬರಿ, ವ್ಯಾಕರಣ, ಛಂದಸ್ಸು ಮುಂತಾದ ಪರಂಪರೆಯ ಸಾಹಿತ್ಯಕ್ಕೆ ಸೀಮಿತವಾಗಿ ಉಳಿದಿಲ್ಲ. ವಿಜ್ಞಾನ, ಸಮಾಜಶಾಸ್ತ್ರ, ಕಾನೂನು, ವೈದ್ಯಕೀಯ, ಕೃಷಿ, ಮಹಿಳಾ ಅಧ್ಯಯನ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿಯೂ ಕನ್ನಡ ಬೆಳೆಯುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಬಳಕೆಯಾಗುತ್ತಿಲ್ಲ. ಇತರ ಭೌತಿಕ ವಸ್ತುಗಳು ಬಳಸಿದಂತೆಲ್ಲ ಸವೆಯುತ್ತಾ ಹೋಗುತ್ತವೆ. ಭಾಷೆ ಹಾಗಲ್ಲ. ಅದನ್ನು ಬಳಸಿದಷ್ಟೂ ಹುಲುಸಾಗಿ ಬೆಳೆಯುತ್ತದೆ. ಭಾಷೆ ನಮ್ಮ ಬದುಕಿನ ಉಸಿರು. ಅದು ನಮ್ಮ ವರ್ತಮಾನವೂ ಹೌದು. ಭವಿಷ್ಯವೂ ಹೌದು. ಎಂತಲೇ ನಮಗೆ ಭಾಷೆಯೊಡನೆ ಒಂದು ಭಾವನಾತ್ಮಕ ಸಂಬಂಧವಿದೆ" ಎಂದು ಮಂಡ್ಯದಲ್ಲಿ ಇಂದಿನಿಂದ ಆರಂಭವಾಗಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣದಲ್ಲಿ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು.
ತಂತ್ರಜ್ಞಾನದ ನೆರವಿನ ಮೇಲೆ ಭಾಷೆಯ ಬೆಳವಣಿಗೆ: "ಕನ್ನಡ ಭಾಷೆಯನ್ನು, ಕನ್ನಡ ಲಿಪಿಯನ್ನು ತಂತ್ರಜ್ಞಾನಕ್ಕೆ ಜೋಡಿಸುವ ವಿಚಾರದಲ್ಲೇ ಇರುವ ಗೊಂದಲಗಳನ್ನು ಮೊದಲು ಪರಿಹರಿಸುವುದು ಅಗತ್ಯ. ಜ್ಞಾನ, ತಂತ್ರಜ್ಞಾನ ಜಾಗತಿಕವಾಗಿ ಅಗಾಧವಾಗಿ ಬೆಳೆದಿದೆ. ಆದರೆ ಜ್ಞಾನವನ್ನು ತಂತ್ರಜ್ಞಾನವನ್ನು ಕನ್ನಡ ಭಾಷೆಯಲ್ಲೇ ಪಡೆದುಕೊಳ್ಳಲು ಸರಿಯಾದ ವ್ಯವಸ್ಥೆ ನಮ್ಮಲ್ಲಿ ಇರಬೇಕು. ದತ್ತಾಂಶಗಳನ್ನು ಕನ್ನಡದಲ್ಲೇ ರೂಪಿಸುವ ಹಲವಾರು ಪ್ರಯತ್ನಗಳು ನಡೆದಿವೆ ನಿಜ. ಆದರೆ ಅವು ಇಲ್ಲಿರುವ ಅಗಾಧ ಅಗತ್ಯವನ್ನು ಪೂರೈಸುವ ಪ್ರಮಾಣದಲ್ಲಿ ಇವೆಯೇ? ಈ ಕುರಿತು ಸರ್ಕಾರ ಮತ್ತು ತಂತ್ರಜ್ಞಾನ ಪರಿಣತರು ಗಂಭೀರ ಚಿಂತನೆ ನಡೆಸಬೇಕಿದೆ. ರಾಜಕಾರಣದ ಜೊತೆಗೆ ಜ್ಞಾನಕಾರಣ, ಜನಕಾರಣಗಳ ಬಗ್ಗೆ ನಮ್ಮ ಸರ್ಕಾರಗಳು ಗಮನ ಹರಿಸಲೇಬೇಕು" ಎಂದು ಅವರು ತಿಳಿಸಿದರು.
ಗೂಗಲ್, ಯಾಂತ್ರಿಕ ಬುದ್ಧಿಮತ್ತೆಗೂ ಬರಲಿ ಶುದ್ಧ ಕನ್ನಡ ಪ್ರೇಮ: "ಗೂಗಲ್ ಜ್ಞಾನದ ಪ್ರಸಾರ ಮಾಡುವುದು, ಪಾಠಗಳನ್ನು ಹೇಳಿಕೊಡುವುದು ಇಂಗ್ಲಿಷ್ ಭಾಷೆಯಲ್ಲೇ. ಕನ್ನಡ ಭಾಷೆಯ ಮೂಲಕವೂ ಲೋಕವನ್ನು ಅರಿಯಲು ಸಾಧ್ಯ, ಜ್ಞಾನವನ್ನು ಪಡೆಯಲು ಸಾಧ್ಯ ಎನ್ನುವುದನ್ನು ನಾವೀಗ ತೋರಿಸಿ ತಿಳಿಸದಿದ್ದರೆ, ಮುಂದಿನ ಪೀಳಿಗೆಯ ಮಕ್ಕಳು 'ಜ್ಞಾನ ಎಂದರೆ ಇಂಗ್ಲಿಷ್' ಎಂದು ನಂಬುವ ಅಪಾಯವಿದೆ. ಜ್ಞಾನ ಪಡೆಯುವ ತಂತ್ರಜ್ಞಾನಕ್ಕೆ ಕನ್ನಡವನ್ನು ಹೊಂದಿಸಿದರೆ, ಕನ್ನಡ ಜ್ಞಾನದ ಭಾಷೆಯೂ ಆಗುತ್ತದೆ" ಎಂದರು.
ಅಂತರ-ರಾಜ್ಯ ಭಾಷಾ ವಿನಿಮಯ: "ದ್ರಾವಿಡ ಭಾಷಾ ಕುಟುಂಬದಲ್ಲಿ ಕನ್ನಡವು ಒಂದು ಪ್ರಾಚೀನ ಮತ್ತು ಸಾಹಿತ್ಯದ ದೃಷ್ಟಿಯಿಂದ ಮಹತ್ವದ ಭಾಷೆಯಾಗಿದೆ. ಕನ್ನಡ ಸಾಹಿತ್ಯವು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ರಾಘವಾಂಕನ ಹರಿಶ್ಚಂದ್ರ ಕಾವ್ಯ, ಕುಮಾರವ್ಯಾಸ ಭಾರತ, ಕವಿರಾಜಮಾರ್ಗ, ವಡ್ಡಾರಾಧನೆ, ಕಥೆ-ಕಾದಂಬರಿಗಳು ಮುಂತಾದ ಕನ್ನಡದ ಅಭಿಜಾತ ಕೃತಿಗಳು ಇಂಗ್ಲಿಷ್ಗೆ ಅನುವಾದವಾಗಿ ಜಾಗತಿಕ ಸಾಹಿತ್ಯದ ಭಾಗವಾಗುತ್ತಿವೆ. ವಚನಗಳು ಇಂಗ್ಲಿಷ್ ಅಲ್ಲದೆ ದೇಶದ ಮತ್ತು ಜಗತ್ತಿನ ಇತರ ಪ್ರಮುಖ ಭಾಷೆಗಳಿಗೆ ಅನುವಾದಗಳಾಗುತ್ತಿವೆ" ಎಂದು ಹೇಳಿದರು.
ಇದನ್ನೂ ಓದಿ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ