ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ಹಾಗೂ ಪ್ರಸ್ತುತ ತೆಲುಗು ಚಿತ್ರರಂಗದಲ್ಲೂ ಮನೆಮಾತಾಗಿರುವ ನಟ ರಿಷಿ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ರುದ್ರ ಗರುಡ ಪುರಾಣ'. ಸದ್ಯ ತನ್ನ ಶೀರ್ಷಿಕೆಯಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರುವ ರುದ್ರ ಗರುಡ ಪುರಾಣ ಚಿತ್ರದ ಟೀಸರ್ ಅನಾವರಣಗೊಂಡಿದೆ. ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಂದರ್ಭ ನಿರ್ದೇಶಕ ಜೇಕಬ್ ವರ್ಗೀಸ್ ಉಪಸ್ಥಿತರಿದ್ದರು.
ನಿರ್ದೇಶಕ ನಂದೀಶ್ ಮಾತನಾಡಿ, 1955ರಲ್ಲಿ ನ್ಯೂಯಾರ್ಕ್ನಿಂದ ಮಿಯಾನ್ ಸಿಟಿಗೆ ಹೊರಟಿದ್ದ ವಿಮಾನ ಮಿಸ್ ಆಗುತ್ತದೆ. ವಿಮಾನದ ಸುಳಿವು ಸಿಕ್ಕಿರುವುದಿಲ್ಲ. ಇದಾದ ಮೂವತ್ತು ವರ್ಷಗಳ (1985 ರಲ್ಲಿ) ನಂತರ ಮತ್ತೆ ಆ ವಿಮಾನ ವಾಪಸ್ ಬರುತ್ತದೆ. ಅದು ಹೇಗೆ?. ಓರ್ವ ರಾಜ ಇಡೀ ಭೂಮಂಡಲವನ್ನೇ ಗೆಲ್ಲಬೇಕೆಂಬ ಆಸೆಯಿಂದ ತನ್ನ ಪಕ್ಕದ ದೇಶದ ಮೇಲೆ ಯುದ್ದಕ್ಕೆ ಹೋಗಿ ಲಕ್ಷಾಂತರ ಜನರನ್ನು ಕೊಂದು ಜಯ ಸಾಧಿಸಿರುತ್ತಾನೆ. ಯುದ್ದ ಮುಗಿದ ಮೇಲೆ ರಣರಂಗಕ್ಕೆ ಹೋಗುತ್ತಾನೆ. ಅಲ್ಲಿ ಸಾಲುಸಾಲು ಹೆಣದ ರಾಶಿಗಳಿರುತ್ತವೆ. ಸತ್ತು ಬಿದ್ದಿದ್ದ ಸೈನಿಕನೊಬ್ಬನ ಮಾಂಸವನ್ನು ಮನುಷ್ಯನೋರ್ವ ತಿನ್ನುತ್ತಿರುತ್ತಾನೆ. ಆ ಸಂದರ್ಭ ರಾಜ ಅಲ್ಲಿಗೆ ಬರುತ್ತಾನೆ. ಆ ಮನುಷ್ಯ ರಾಜನನ್ನು ಕಂಡು, ಕ್ಷಮಿಸು ರಾಜ ನಾನು ನಿನ್ನ ಆಹಾರವನ್ನು ತಿನ್ನುತ್ತಿದ್ದೇನೆ ಎನ್ನುತ್ತಾನೆ. ಆಗ ರಾಜ ನಾನು ನಿನ್ನಂತೆ ನರಭಕ್ಷಕನಲ್ಲ ಅಂತಾನೆ. ಆಗ ಆ ಮನುಷ್ಯ ಹಾಗಾದರೆ ಇಷ್ಟು ಜನರನ್ನು ಏಕೆ ಸಾಯಿಸಿದ್ದೀಯಾ ಎಂದು ರಾಜನನ್ನು ಕೇಳುತ್ತಾನೆ?. ಈ ಎರಡು ಉಪಕಥೆಗಳೇ ನಮ್ಮ ಚಿತ್ರದ ಕಥೆಗೆ ಸ್ಪೂರ್ತಿ ಎಂದು ಹೇಳಿದರು.
ಬಳಿಕ ನಟ ರಿಷಿ ಮಾತನಾಡಿ, ನಮ್ಮ ಸುತ್ತಮುತ್ತ ನಡೆಯುವ ಅನೇಕ ಸಮಸ್ಯೆಗಳನ್ನಿಟ್ಟುಕೊಂಡು ನಂದೀಶ್ ಈ ಚಿತ್ರದ ಕಥೆ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ನಿರ್ಮಾಣದ ಕವಲುದಾರಿ ಚಿತ್ರದ ನಂತರ ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ರುದ್ರ ನನ್ನ ಪಾತ್ರದ ಹೆಸರು ಎಂದು ಮಾಹಿತಿ ನೀಡಿದರು. ರಿಷಿ ಜೋಡಿಯಾಗಿ ನಟಿಸಿರುವ ಪ್ರಿಯಾಂಕಾ ಕುಮಾರ್ ಮಾತನಾಡಿ, ಇದು ನನ್ನ ಎರಡನೇ ಚಿತ್ರ. ನನ್ನ ಪಾತ್ರ ವಿಭಿನ್ನವಾಗಿದೆ. ನಿಮಗೆ ಸಿನಿಮಾ ನೋಡಿದಾಗ ಆ ವಿಭಿನ್ನತೆ ತಿಳಿಯಲಿದೆ ಎಂದು ತಿಳಿಸಿದರು.