ರಿಷಬ್ ಶೆಟ್ಟಿ, ನಟನೆ, ನಿರ್ದೇಶನ, ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಏಳಿಗೆಯಲ್ಲಿ ಡಿವೈನ್ ಸ್ಟಾರ್ ಪಾತ್ರ ಹಿರಿದು. ತಮ್ಮ ಚಿತ್ರಗಳ ಜೊತೆಗೆ ಹೊಸ ತಂಡಗಳನ್ನೂ ಸಹ ಅವರು ಬೆಂಬಲಿಸುತ್ತಿದ್ದಾರೆ. ಇದೀಗ ಹೊಸ ಧಾರವಾಹಿಗೆ ಬೆಂಬಲಿಸುವ ಮೂಲಕ ಗಮನ ಸೆಳೆದಿದ್ದಾರೆ.
'ಅಣ್ಣಯ್ಯ' ಸಿರಿಯಲ್ಗೆ ಕಾಂತಾರ ಶಿವನ ಸಾಥ್:ಝೀ ಕನ್ನಡದಲ್ಲಿ ಇಂದಿನಿಂದ ಹೊಸ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಇದು ಅಣ್ಣ ತಂಗಿಯ ಕಥೆಯಾಗಿದ್ದು, 'ಅಣ್ಣಯ್ಯ' ಸಿರಿಯಲ್ನ ಶೀರ್ಷಿಕೆ. ನಾಯಕ ನಟನಿಗೆ ನಾಲ್ಕು ತಂಗಿಯರು. ಅವರಿಗೆ ಮದುವೆ ಮಾಡುವ ಜವಾಬ್ದಾರಿ ಅಣ್ಣನದ್ದು. ತಂಗಿಯರ ಜವಾಬ್ದಾರಿ ಹೊರುವ ಅಣ್ಣನ ಕಥೆಯನ್ನು ಈ ಧಾರಾವಾಹಿ ಒಳಗೊಂಡಿದೆ. ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಅವರೀಗ ಈ ತಂಡಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ಈ ಅಣ್ಣಯ್ಯ ಧಾರವಾಹಿಯನ್ನು ರಿಷಬ್ ಶೆಟ್ಟಿ ಗೆಳೆಯ ಪ್ರಮೋದ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಸೀರಿಯಲ್ ಪ್ರೊಡಕ್ಷನ್ನಲ್ಲಿ ಪ್ರಮೋದ್ ಅವರಿಗಿದು ಮೊದಲ ಹೆಜ್ಜೆ. ಗೆಳೆಯನ ಹೊಸ ಪ್ರಯತ್ನಕ್ಕೆ ರಿಷಬ್ ಅವರ ಬಲ ಸಿಕ್ಕಿದೆ. ಸ್ಪೆಷಲ್ ಪ್ರಮೋಶನ್ ವಿಡಿಯೋವನ್ನು ಝೀ ಕನ್ನಡ ಹಂಚಿಕೊಂಡಿದ್ದು, ಸಖತ್ ಸದ್ದು ಮಾಡುತ್ತಿದೆ.
ಇನ್ಸ್ಟಾಗ್ರಾಮ್ ಪೋಸ್ಟ್: ಝೀ ಕನ್ನಡ ತನ್ನ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಎರಡು ವಿಡಿಯೋಗಳನ್ನು ಹಂಚಿಕೊಂಡಿದೆ. ಈ ಎರಡೂ ಪ್ರೋಮೋಗಳಲ್ಲಿ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಬೆಳಗ್ಗೆ ಹಂಚಿಕೊಂಡ ವಿಡಿಯೋಗೆ, ''ಅಣ್ಣ ಅನ್ನೋ ಪದಕ್ಕೆ ಎರಡೇ ಅಕ್ಷರ. ಆದ್ರೆ, ಅಣ್ಣನ ಪ್ರೀತಿ ಲೆಕ್ಕವೇ ಇಲ್ಲದಷ್ಟು ಎತ್ತರ. 'ಅಣ್ಣಯ್ಯ' ಇಂದಿನಿಂದ ರಾತ್ರಿ 7:30ಕ್ಕೆ'' ಎಂಬ ಕ್ಯಾಪ್ಷನ್ ಕೊಡಲಾಗಿದೆ. ಸಂಜೆ ಶೇರ್ ಮಾಡಲಾದ ಮತ್ತೊಂದು ವಿಡಿಯೋಗೆ, ''ಶಿವ-ಪಾರ್ವತಿಯ ಪ್ರೀತಿ ಕಥೆ ಭಾರೀ ಗಮ್ಮತ್ತುಂಟು ಅಂತಿದ್ದಾರೆ ಕಾಡುಬೆಟ್ಟು ಶಿವಣ್ಣ. 'ಅಣ್ಣಯ್ಯ' ಇಂದಿನಿಂದ ರಾತ್ರಿ 7:30ಕ್ಕೆ'' ಎಂದು ಬರೆಯಲಾಗಿದೆ.