ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಅಭಿನಯಕ್ಕೆ ಮಾತ್ರ ಸೀಮಿತವಾಗಿಲ್ಲ. ವಿವಿಧ ವಿಭಾಗಗಳಲ್ಲಿ ಶ್ರಮ ಹಾಕುತ್ತಾ ತಮ್ಮ ಪ್ರತಿಭೆ ಪ್ರದರ್ಶಿಸುತ್ತಲೇ ಬಂದಿದ್ದಾರೆ. ನಟನೆ, ನಿರ್ದೇಶನದ ಜೊತೆ ಜೊತೆಗೇನೆ ಚಲನಚಿತ್ರ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿರುವ ಕಾಂತಾರ ಸ್ಟಾರ್ನ ಮುಂದಿನ ಚಿತ್ರಗಳ ಮೇಲೆ ಕನ್ನಡಿಗರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಹೆಸರಾಂತ ನಟನ ಮುಂದಿನ ಬಹುನಿರೀಕ್ಷಿತ ಪ್ರೊಜೆಕ್ಟ್ 'ಲಾಫಿಂಗ್ ಬುದ್ಧ'. ಈ ಚಿತ್ರದಲ್ಲಿ ಕಿರಿಕ್ ಪಾರ್ಟಿ ನಿರ್ದೇಶಕ ಬಣ್ಣ ಹಚ್ಚಿಲ್ಲ, ಬದಲಾಗಿ ಬಂಡವಾಳ ಹೂಡಿದ್ದಾರೆ.
ಟ್ರೇಲರ್ ಅನಾವರಣಕ್ಕೆ ಮುಹೂರ್ತ ಫಿಕ್ಸ್: ತಮ್ಮ ರಿಷಬ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್ ಅಡಿ ನಿರ್ಮಾಣ ಮಾಡಿರುವ 'ಲಾಫಿಂಗ್ ಬುದ್ಧ' ಚಿತ್ರ ಬಿಡುಗಡೆ ಹೊಸ್ತಿಲಿನಲ್ಲಿದೆ. ಈಗಾಗಲೇ ಚಿತ್ರದ ಚೊಚ್ಚಲ ''ಎಂಥ ಚೆಂದಾನೆ ಇವಳು'' ಗೀತೆಯನ್ನು ಅನಾವರಣಗೊಳಿಸುವ ಮೂಲಕ ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. ಈ ತಿಂಗಳಾಂತ್ಯ ಚಿತ್ರಂದಿರ ಪ್ರವೇಶಿಸಲಿರುವ 'ಲಾಫಿಂಗ್ ಬುದ್ಧ'ನ ಟ್ರೇಲರ್ ಅನಾವರಣಕ್ಕೀಗ ಮುಹೂರ್ತ ಫಿಕ್ಸ್ ಆಗಿದೆ.
ರಿಷಬ್ ಶೆಟ್ಟಿ ಪೋಸ್ಟ್: ಈ ವಿಚಾರವನ್ನು ಸ್ವತಃ ನಿರ್ಮಾಪಕ ರಿಷಬ್ ಶೆಟ್ಟಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಟ್ರೇಲರ್ ಬಿಡುಗಡೆಯ ಪೋಸ್ಟರ್ ಹಂಚಿಕೊಂಡ ಅವರು, ಲಾಫಿಂಗ್ ಬುದ್ಧ 14ರ ಮಿಡ್ನೈಟ್ ಡ್ಯೂಟಿಗೆ ಬರಲಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ನಲ್ಲಿ ನಾಯಕ ನಟ ಪ್ರಮೋದ್ ಶೆಟ್ಟಿ ತಮ್ಮ ಸಹುದ್ಯೋಗಿಯೊಂದಿಗೆ ಸ್ಕೂಟರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದ್ದು, 14ರ ಮಿಡ್ ನೈಟ್ ಬಿಡುಗಡೆ ಆಗಲಿದೆ ಎಂಬ ಮಾಹಿತಿಯೂ ಇದರಲ್ಲಿದೆ.