ರಿಷಬ್ ಶೆಟ್ಟಿ ಪ್ರತಿಕ್ರಿಯೆ (ETV Bharat) 'ಕಾಂತಾರ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ರಿಷಬ್ ಶೆಟ್ಟಿ ಅವರಿಗೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಕನ್ನಡ ಸಿನಿಮಾ 'ಕಾಂತಾರ' ಅತ್ಯುತ್ತಮ ನಟ ಹಾಗೂ ಮನರಂಜನಾ ವಿಭಾಗದಲ್ಲೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಈ ಕುರಿತು ಮಾತನಾಡಿರುವ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, "ನನಗೆ ಅತ್ಯುತ್ತಮ ನಟ ಪ್ರಶಸ್ತಿ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ರಾಷ್ಟ್ರೀಯ ಪ್ರಶಸ್ತಿ ಕಮಿಟಿಯಲ್ಲಿ ನಮ್ಮ ಸಿನಿಮಾಗೆ ಮಾನ್ಯತೆ ಸಿಕ್ಕಿದೆ ಅನ್ನೋದು ಗೊತ್ತಾಗಿತ್ತು. ಹಾಗೇ ನನಗೆ ರಾಷ್ಟ್ರೀಯ ಪ್ರಶಸ್ತಿ ಬರುತ್ತೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾಕಲಾಗುತ್ತಿತ್ತು. ಆಗ ನಾನು ನಂಬಿರಲಿಲ್ಲ".
"ಈ ರಾಷ್ಟ್ರೀಯ ಪ್ರಶಸ್ತಿಯ ಅತ್ಯುತ್ತಮ ನಟ ವಿಭಾಗದಲ್ಲಿ ಮಲೆಯಾಳಂ ಸ್ಟಾರ್ ಮುಮ್ಮಟಿ ಅಂತಹ ದೊಡ್ಡ ಸ್ಟಾರ್ಗಳ ಹೆಸರಿತ್ತು. ಅವರ ಜೊತೆ ನನ್ನ ಹೆಸರಿದ್ದು, ನನಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದ್ದು ಬಹಳ ಆಗುತ್ತಿದೆ. ಇನ್ನೂ ಕಾಂತಾರಾ ಸಿನಿಮಾ ಸಕ್ಸಸ್ಗೆ ಕಾರಣರಾದ ಕ್ಯಾಮರಾಮ್ಯಾನ್ ಅರವಿಂದ್ ಕಶ್ಯಪ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕಾಸ್ಟೂಮ್ ಡಿಸೈನ್ ಪ್ರಗತಿ, ನಟ ಕಿಶೋರ್ ಸೇರಿದಂತೆ ಇಡೀ ತಂಡಕ್ಕೆ ನನ್ನ ಕೃತಜ್ಞತೆ ಅರ್ಪಿಸುತ್ತೇನೆ" ಎಂದರು.
ಇದನ್ನೂ ಓದಿ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ರಿಷಬ್ ಶೆಟ್ಟಿ ಅತ್ಯುತ್ತಮ ನಟ - National Film Awards
"ಪ್ರಶಸ್ತಿ ಸಿಕ್ಕ ಬಳಿಕ ನನಗೆ ಮೊದಲು ವಿಶ್ ಮಾಡಿದ್ದು ನನ್ನ ಮಡದಿ ಪ್ರಗತಿ. ನಟರಲ್ಲಿ ಯಶ್ ಸರ್, ತಮಿಳು ನಟ ವಿಕ್ರಮ್ ಸರ್ ಫೋನ್ ಮಾಡಿ ನನಗೆ ವಿಶ್ ಮಾಡಿದ್ದಾರೆ. ಈ ರಾಷ್ಟ್ರೀಯ ಪ್ರಶಸ್ತಿ ಬಂದಿರೋದು ನನ್ನ ಜವಾಬ್ದಾರಿ ಹೆಚ್ಚಿಸಿದೆ. ನಾನು ಮುಂದಿನ ದಿನಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುವ ಸಿನಿಮಾಗಳನ್ನು ಮಾಡುತ್ತೇನೆ. ಹಾಗೇ ಕಾಂತಾರ 2 ಚಿತ್ರದ ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಾಗಿದೆ" ಎಂದು ತಿಳಿಸಿದರು.