ಹೈದರಾಬಾದ್: ಕಾಲಿವುಡ್ ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ತಂಗಲಾನ್'. ಬಿಡುಗಡೆಗೆ ಸಜ್ಜಾಗಿರೋ ಸಿನಿಮಾ ಭರ್ಜರಿ ಪ್ರಮೋಶನ್ನಲ್ಲಿ ಬ್ಯುಸಿಯಾಗಿದೆ. ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೇ ಆಗಸ್ಟ್ 15ರಂದು ಬಿಡುಗಡೆ ಆಗಲಿದ್ದು, ಇತ್ತೀಚೆಗೆ ಬೆಂಗಳೂರಿಗೆ ಚಿತ್ರತಂಡ ಆಗಮಿಸಿತ್ತು. ಇದೀಗ ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.
ಹೌದು, ರಿಷಬ್ ಅವರ ಭಾವನಾತ್ಮಕ ಸೋಷಿಯಲ್ ಮೀಡಿಯಾ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಮನರಂಜನಾ ಉದ್ಯಮದಲ್ಲಿ ತಮ್ಮ ಪ್ರಯಾಣದ ಉದ್ದಕ್ಕೂ ವಿಕ್ರಮ್ 'ಮಾರ್ಗದರ್ಶಕ ಬೆಳಕಾಗಿದ್ದಾರೆ' ಎಂಬರ್ಥದಲ್ಲಿ ಕ್ಯಾಪ್ಷನ್ ಕೊಟ್ಟಿದ್ದಾರೆ. 24 ವರ್ಷಗಳ ನಿರೀಕ್ಷೆಯ ಬಳಿಕ ತಮ್ಮ ಮೆಚ್ಚಿನ ನಟ (ಮಾದರಿ ವ್ಯಕ್ತಿತ್ವ) ನನ್ನು ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶ ಸಿಕ್ಕಿತು, ಕನಸು ನನಸಾಯಿತು ಎಂಬುದನ್ನು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ತಮಿಳು ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ಅವರೊಂದಿಗಿನ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳ ಜೊತೆಗೆ "ನಟನಾಗುವ ನನ್ನ ಪ್ರಯಾಣದಲ್ಲಿ ವಿಕ್ರಮ್ ಸರ್ ನನಗೆ ಸ್ಫೂರ್ತಿಯಾಗಿದ್ದಾರೆ. 24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಇಂದು ನನ್ನ ಆರಾಧ್ಯನನ್ನು ಭೇಟಿಯಾಗಿದ್ದು, ನಾನು ಭೂಮಿ ಮೇಲಿನ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನನ್ನಂತಹ ಕಲಾವಿದರಿಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು. ತಂಗಲಾನ್ ಯಶಸ್ಸಿಗೆ ಶುಭ ಹಾರೈಸುತ್ತೇನೆ. ತಂಗಲಾನ್, ಲವ್ ಯೂ ಚಿಯಾನ್'' ಎಂದು ಬರೆದುಕೊಂಡಿದ್ದಾರೆ.