ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಸಿನಿಮಾ ನಿರ್ದೇಶಕ ಮಂಸೋರೆ ಅವರ ವಿರುದ್ಧ ಪತ್ನಿಗೆ ಮಾನಸಿಕ, ದೈಹಿಕ ಹಿಂಸೆ, ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿಬಂದಿದೆ. ಮಂಸೋರೆ, ತಾಯಿ ವೆಂಕಟಲಕ್ಷ್ಮಮ್ಮ ಹಾಗೂ ಸಹೋದರಿ ಹೇಮಲತಾ ವಿರುದ್ಧ ಪತ್ನಿ ಅಖಿಲಾ ದೂರು ಸಲ್ಲಿಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದೂರಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಪತ್ರ ಬರೆದಿರುವ ಮಂಸೋರೆ, "ನನ್ನ ಪತ್ನಿ ಅಖಿಲಾ ಮಾನಸಿಕ ಅಸ್ವಸ್ಥರು. ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿರುವ ಈ ದೂರನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯತೆಯನ್ನು ಮನಗಾಣಬೇಕಿದೆ. ಬಳಿಕ ನಾವು ಒಟ್ಟಿಗಿರಬೇಕೆ ಅಥವಾ ಬೇಡವೇ ಎಂಬುದನ್ನು ನಿಶ್ಚಯಿಸುತ್ತೇವೆ" ಎಂದು ತಿಳಿಸಿದ್ದಾರೆ.
ಪತ್ನಿ ಅಖಿಲಾ ತಮ್ಮ ದೂರಿನಲ್ಲಿ, ''ಪತಿ ಮಂಸೋರೆ (ಮಂಜುನಾಥ) ವೈವಾಹಿಕ ಜೀವನದ ಆರಂಭದಿಂದಲೂ ಕಿರುಕುಳ ನೀಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಸಿನಿಮಾ ಮಾಡಲು ನಮ್ಮ ಮನೆಯವರಿಂದ 10 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ" ಎಂದು ಆರೋಪಿಸಿದ್ದಾರೆ.
"ಅಲ್ಲದೇ ಮಂಸೋರೆ, ಅವರ ತಾಯಿ ವೆಂಕಟಲಕ್ಷ್ಮಮ್ಮ ಹಾಗೂ ಸಹೋದರಿ ಹೇಮಲತಾ ತಮಗೆ 30 ಲಕ್ಷ ರೂ. ಮೌಲ್ಯದ ಎಸ್.ಯು.ವಿ ಕಾರು ಕೊಡಿಸುವಂತೆ ಪೀಡಿಸಿದ್ದಾರೆ. ಈ ವಿಷಯವನ್ನು ಎಲ್ಲಾದರೂ ಹೇಳಿದರೆ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ" ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಒಟಿಟಿಗೆ ಎಂಟ್ರಿ ಕೊಟ್ಟ 'ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ'
ಪತ್ನಿಯ ಆರೋಪ ತಳ್ಳಿ ಹಾಕಿದ ಮಂಸೋರೆ: ಪತ್ನಿ ಆರೋಪಕ್ಕೆ ಪ್ರತಿಯಾಗಿ ಸಹಾಯಕ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಮಂಸೋರೆ, ''ನನ್ನ ಪತ್ನಿಗೆ ಮಾನಸಿಕ ಸಮಸ್ಯೆ, ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ, ನನ್ನ ತಾಯಿಯನ್ನು ಮನೆಯಿಂದ ಹೊರಗೆ ಹಾಕುವಂತೆ ಆಕೆ ಹಠ ಹಿಡಿದಿದ್ದರು. ನನ್ನ ಹಾಗೂ ನನ್ನ ತಾಯಿಯ ಮೇಲೆ ದೈಹಿಕ ಹಲ್ಲೆಯನ್ನೂ ಮಾಡಿದ್ದಾರೆ. ನಾನು ನನ್ನ ಪತ್ನಿಯ ಕಡೆಯವರಿಂದ ವರದಕ್ಷಿಣೆ ಅಥವಾ ಉಡುಗೊರೆ ಪಡೆದಿಲ್ಲ. ನನ್ನ ಬ್ಯಾಂಕ್ ಖಾತೆ ಅಥವಾ ವ್ಯವಹಾರಗಳನ್ನು ಪರೀಕ್ಷೆಗೆ ಒಳಪಡಿಸಬಹುದು. ದೂರು ನೀಡುವ ಮುಂಚೆ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದ ದೃಶ್ಯ, ನನ್ನ ಹಾಗೂ ನನ್ನ ತಾಯಿಯ ವಿರುದ್ಧ ನಿಂದನೆ ಮಾಡಿರುವುದು, ಹಲ್ಲೆ ಮಾಡಿದ ವಿಡಿಯೋ ಸಾಕ್ಷಿಗಳಿವೆ. ಅವುಗಳನ್ನು ಅರ್ಜಿಯೊಟ್ಟಿಗೆ ನೀಡಿದ್ದೇನೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬಾಬಿ ಡಿಯೋಲ್ ಬರ್ತ್ಡೇ: 'ಕಂಗುವ'ನ ಉಧಿರನ್ ಲುಕ್ ಔಟ್
''ನಾನು ಅವರಿಗೆ ಕೊಡಿಸಿರುವ ಚಿನ್ನಾಭರಣದ ಜೊತೆಗೆ ತಮ್ಮ ಸಿನಿಮಾಕ್ಕೆ ಬಂದಿರುವ ರಾಷ್ಟ್ರಪ್ರಶಸ್ತಿ ಹಾಗೂ ಇತರೆ ಪದಕಗಳನ್ನೂ ಸಹ ತೆಗೆದುಕೊಂಡು ಹೋಗಿದ್ದಾರೆ. ಪತ್ನಿಯ ವಿರುದ್ಧ ದೂರು ಸಲ್ಲಿಸುವ ಉದ್ದೇಶ ನನಗಿಲ್ಲ. ಆಕೆಯ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಸಿಗಬೇಕೆಂಬುದು ನನ್ನ ಕಾಳಜಿ. ಪತ್ನಿ ಸಲ್ಲಿಸಿರುವ ಸುಳ್ಳು ದೂರಗಳ ವಿರುದ್ಧ ನನಗೆ ರಕ್ಷಣೆ ಒದಗಿಸಿ'' ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.