ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಜನಪ್ರಿಯ ನಟ. ಅಭಿಮಾನಿಗಳ ಪಾಲಿಗೆ ಡಿ ಬಾಸ್. ಆದ್ರಿಂದು ವಿವಾದಗಳ ಸುಳಿಯಲ್ಲಿ ಸಿಲುಕಿದ್ದಾರೆ. ಗೆಳತಿ ಪವಿತ್ರಾ ಗೌಡ ಅವರ ಹೆಸರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಅಷ್ಟಕ್ಕೂ ಯಾರು ಈ ಪವಿತ್ರಾ ಗೌಡ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ..
ಕಾಲೇಜು ದಿನಗಳಲ್ಲೇ ಬಣ್ಣದ ಲೋಕದ ಕ್ರೇಜ್; ಅಗಮ್ಯ ಎಂಬ ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಿದ್ದ ಪವಿತ್ರಾ ಗೌಡ ಸ್ಟಾರ್ ನಟಿಯರ ಪಟ್ಟಿಯಲ್ಲಿಲ್ಲ. ಕಾಲೇಜು ದಿನಗಳಲ್ಲೇ ಬಣ್ಣದ ಜಗತ್ತಿನ ಕ್ರೇಜ್ ಬೆಳೆಸಿಕೊಂಡು ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಿಂಚಿದ್ದರು. ಆ ನಂತರ ಮಾಡೆಲ್ ಆಗುವ ಕನಸು ಕಂಡರು.
ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಸಿಎ ಪದವಿ ಮುಗಿಸಿರುವ ಇವರು, ಮಾಡೆಲಿಂಗ್ನಲ್ಲಿ ಗುರುತಿಸಿಕೊಂಡಿದ್ದರು. ಸಾಕಷ್ಟು ರ‍್ಯಾಂಪ್ ಶೋಗಳಲ್ಲಿ ಹೆಜ್ಜೆ ಹಾಕಿರುವ ಅನುಭವವಿದೆ. ಅಲ್ಲದೇ ಬೆಂಗಳೂರಿನಲ್ಲಿ ನಡೆದ ಮೂರು ಫ್ಯಾಷನ್ ಶೋಗಳಲ್ಲಿ ಮೂರು ಬಾರಿ ಶೋ ಟಾಪರ್ ಪಟ್ಟ ಗಿಟ್ಟಿಸಿಕೊಂಡ ಚೆಲುವೆ ಮೂಲತಃ ಬೆಂಗಳೂರಿನ ಜೆ.ಪಿ ನಗರದವರು.
ಮಾಡೆಲ್ ಲೋಕದಲ್ಲಿ ಮಿಸ್ ಬೆಂಗಳೂರು; ಪದವಿ ಮುಗಿಯುತ್ತಲೇ ಮಾಡೆಲ್ ಆಗುವ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭವಾಯಿತು. ಸಖತ್ ಆಕ್ಟಿವ್ ಆಗಿದ್ದ ಈ ಹುಡುಗಿ ಬಲು ಬೇಗನೇ ಆ ವಲಯದ ಎಲ್ಲರ ಗಮನ ಸೆಳೆದರು. ಅತಿ ಕಡಿಮೆ ಅವಧಿಯಲ್ಲೇ ಹಲವಾರು ಚಿನ್ನಾಭರಣ ಮಳಿಗೆಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಮಾಡೆಲ್ ಲೋಕದಲ್ಲಿ ಮಿಸ್ ಬೆಂಗಳೂರು ಆಗಿಯೂ ಹೊರಹೊಮ್ಮಿದರು.
ಆರಂಭದಿಂದಲೂ ಪವಿತ್ರಾಗೆ ಚಿತ್ರರಂಗದತ್ತ ಒಂದು ಸೆಳೆತವಿತ್ತು. ಅವರಿದ್ದ ಮಾಡೆಲಿಂಗ್ ಜಗತ್ತು ಅದಕ್ಕೆ ಪೂರಕವಾಗಿದ್ದುದರಿಂದ ಸಿನಿರಂಗ ಪ್ರವೇಶಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಅಗಮ್ಯ ಚಿತ್ರಕ್ಕಾಗಿ ನಟಿಯ ಹುಡುಕಾಟದಲ್ಲಿದ್ದ ನಿರ್ದೇಶಕ ಉಮೇಶ್ ಗೌಡರ ಕಣ್ಣಿಗೆ ಬಿದ್ದದ್ದು ಪವಿತ್ರಾ. ಒಂದು ಕಾಲದಲ್ಲಿ ಬೆಂಗಳೂರು ಭೂಗತಲೋಕವನ್ನು ಆಳಿದ್ದ ಎಂ.ಪಿ ಜಯರಾಜ್ ಮಗ ನಾಯಕನಾಗಿದ್ದ ಈ ಸಿನಿಮಾದಲ್ಲಿ ಪವಿತ್ರಾ ಕೂಡಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆದರೆ ಸಿನಿಮಾ ನಿರೀಕ್ಷಿತ ಮಟ್ಟಕ್ಕೆ ಗೆಲುವು ಕಾಣಲಿಲ್ಲ.
ಅಷ್ಟೊತ್ತಿಗೆ ಫಿಜ್ಜಾ ಎಂಬ ಚಿತ್ರ ಮಾಡಿ ಗೆಲುವು ಕಂಡ ತಂಡ ತಮಿಳಿನಲ್ಲಿ ಇನ್ನೊಂದು ಚಿತ್ರಕ್ಕೆ ಕೈ ಹಾಕಿತ್ತು. ಅದಕ್ಕೆ 54312 ಎಂಬ ಹೆಸರನ್ನೂ ಇಟ್ಟಿತ್ತು. ಈ ಚಿತ್ರಕ್ಕೆ ಪವಿತ್ರಾ ನಾಯಕಿಯಾಗಿದ್ದರು. ಆದರೆ ಆ ನಂತರ ಆ ಚಿತ್ರದ ಕಥೆ ಏನಾಯ್ತು ಅನ್ನುವುದು ಖುದ್ದು ಪವಿತ್ರಾರಿಗೆ ಗೊತ್ತು. ಒಟ್ಟಾರೆ ನಟನೆಯಲ್ಲಿ ಅವರು ಅಷ್ಟೊಂದು ಕ್ಲಿಕ್ ಆಗಲಿಲ್ಲ.