ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಸಂಕಷ್ಟ ಮುಂದುವರೆದಿದೆ. ಈ ಹಿಂದಿನ ನ್ಯಾಯಾಂಗ ಬಂಧನ ಅವಧಿ ಅಂತ್ಯ ಹಿನ್ನೆಲೆ, ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಆಗಸ್ಟ್ 14ರ ವರೆಗೂ ಸೆರಮನೆ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದೆ.
ನ್ಯಾಯಾಂಗ ಅವಧಿ ಮುಕ್ತಾಯ ಹಿನ್ನೆಲೆ ಇಂದು 24ನೇ ಎಸಿಎಂಎಂ ನ್ಯಾಯಾಲಯ ವಿಚಾರಣೆ ನಡೆಸಿತು. ವಾದ ಮಂಡಿಸಿದ ಸರ್ಕಾರದ ಪರ ವಕೀಲರು, ಕೊಲೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ. ಕೆಲ ಆರೋಪಿಗಳ ಗುರುತು ಕವಾಯತು ನಡೆಸಬೇಕಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ತಾಂತ್ರಿಕ ಹಾಗೂ ವೈಜ್ಞಾನಿಕ ವರದಿಗಳನ್ನು ಸಂಗ್ರಹಿಸಬೇಕು ಎಂಬುದು ಸೇರಿದಂತೆ 11 ಅಂಶಗಳನ್ನು ಉಲ್ಲೇಖಿಸಿ, ಈ ಹಂತದಲ್ಲಿ ಜಾಮೀನು ಮಂಜೂರು ಮಾಡಬಾರದು ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆಗಸ್ಟ್ 14ರ ವರೆಗೆ ನ್ಯಾಯಾಂಗ ಅವಧಿಯನ್ನು ವಿಸ್ತರಿಸಿ ಆದೇಶಿಸಿದರು.
ಜಾಮೀನು ಮಂಜೂರಾಗದಿರಲು ಕಾರಣವಾದ 11 ಅಂಶಗಳೇನು?
- ಪ್ರಕರಣದ ಪ್ರತ್ಯಕ್ಷ ಸಾಕ್ಷಿದಾರರಿಂದ ಎ-4, ಎ-6 ಮತ್ತು ಎ-7 ಆರೋಪಿಗಳ ಗುರುತು ಕವಾಯತಅನ್ನು ತಹಶೀಲ್ದಾರ್ ನೇತೃತ್ವದಲ್ಲಿ ಆಗಸ್ಟ್ 2ರಂದು ಕೇಂದ್ರ ಕಾರಾಗೃಹದಲ್ಲಿ ನಡೆಸಬೇಕಾಗಿದೆ. ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷಿದಾರರಿಂದ ಗುರುತು ಪತ್ತೆ ಹಚ್ಚದಂತೆ ತಡೆಯುವ ಸಾಧ್ಯತೆ ಇದೆ.
- ತನಿಖೆ ವೇಳೆ ವಶಕ್ಕೆ ಪಡೆದುಕೊಂಡಿರುವ ತಾಂತ್ರಿಕ ಸಾಕ್ಷ್ಯಾಧಾರಗಳಲ್ಲಿ ಎಲ್ಲಾ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದ್ದು, ಇನ್ನೂ ಹಲವಾರು ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ತಜ್ಞರ ಪರಿಶೀಲನೆಗೆ ಕಳುಹಿಸಲಾಗಿದೆ. ವರದಿ ಸಂಗ್ರಹಿಸಿ ಹೆಚ್ಚಿನ ತನಿಖೆ ಕೈಗೊಳ್ಳಬೇಕಿದೆ.
- ಸಿಸಿಟಿವಿ ಡಿವಿಆರ್ಗಳಲ್ಲಿನ ದತ್ತಾಂಶದ ರಿಟ್ರೀವ್ಗೆ ಎಫ್.ಎಸ್.ಎಲ್ ಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ. ಡಿವಿಆರ್‌ನಲ್ಲಿನ ದತ್ತಾಂಶವನ್ನು ಸಂಗ್ರಹಿಸಿ, ಪರಿಶೀಲಿಸಿದ ಬಳಿಕ ಆರೋಪಿಗಳು ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಿ ಮತ್ತೆ ಎಫ್.ಎಸ್.ಎಲ್ಗೆ ಕಳುಹಿಸಿ ವರದಿಯನ್ನು ಪಡೆದುಕೊಳ್ಳಬೇಕು.
- ಆರೋಪಿಗಳು ಕೊಲೆ ಕೃತ್ಯಕ್ಕೆ ಮೊದಲು ಹಾಗೂ ಕೃತ್ಯದ ವೇಳೆ ಮತ್ತು ನಂತರ ಹಲವರನ್ನು ಸಂಪರ್ಕಿಸಿದ್ದು, ಅವರ ಪೈಕಿ ಇನ್ನೂ ಕೆಲ ಸಾಕ್ಷಿದಾರರುಗಳನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಳ್ಳಬೇಕು.
- ಪ್ರಕರಣದಲ್ಲಿ ಇನ್ನೂ ಹಲವಾರು ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷಿದಾರರುಗಳನ್ನು ವಿಚಾರಣೆ ಮಾಡಬೇಕು. ಕಲಂ 184ರ ಅಡಿ ಹೇಳಿಕೆಗಳನ್ನು ಪಡೆದುಕೊಳ್ಳಬೇಕಾಗಿದ್ದು, ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದಲ್ಲಿ ಪ್ರಕರಣದ ಸಾಕ್ಷಿದಾರರಿಗೆ ಹೇಳಿಕೆ ನೀಡದಂತೆ ನೇರವಾಗಿ ಮತ್ತು ಅವರ ಸಹಚರರ ಮೂಲಕ ಬೆದರಿಕೆ ಹಾಕುವ ಮತ್ತು ವ್ಯವಸ್ಥಿತ ರೀತಿಯಲ್ಲಿ ಸಾಕ್ಷ್ಯನಾಶ ಮಾಡುವ ಸಾಧ್ಯತೆಯಿದೆ.
- ಆರೋಪಿಗಳು ಪ್ರಭಾವಿಗಳು ಹಾಗೂ ಹಣಬಲ ಮತ್ತು ಅಭಿಮಾನಿ ಬಳಗವನ್ನು ಹೊಂದಿದ್ದು, ಆರೋಪಿಗಳಿಗೆ ಜಾಮೀನು ನೀಡಿದ್ದಲ್ಲಿ ತಾವು ಅಥವಾ ತಮ್ಮ ಅಭಿಮಾನಿ ಬಳಗದ ಮೂಲಕ ಪ್ರಕರಣದ ಸಾಕ್ಷಿದಾರರಿಗೆ ಸಾಕ್ಷಿ ನುಡಿಯದಂತೆ ಬೆದರಿಕೆ ಹಾಕುವ ಮತ್ತು ಹಣದ ಆಮಿಷ ತೋರಿಸುವ ಹಾಗೂ ಪ್ರಕರಣದ ಮೃತನ ಕುಟುಂಬದವರಿಗೆ ಹೆದರಿಸುವ ಅಥವಾ ಆಮಿಷ ತೋರಿಸಿ ಸಾಕ್ಷಿ ಹೇಳದಂತೆ ಮಾಡುವ ಸಂಭವ ಹೆಚ್ಚಾಗಿರುತ್ತದೆ.
- ಅಲ್ಲದೇ, ಇತ್ತೀಚೆಗೆ ಆರೋಪಿಗಳ ಪರ ಕೆಲ ವ್ಯಕ್ತಿಗಳು ಮೃತನ ಕುಟುಂಬದವರನ್ನು ಭೇಟಿ ಮಾಡುತ್ತಿರುವುದು ತನಿಖೆಯಲ್ಲಿ ತಿಳಿದುಬಂದಿರುತ್ತದೆ.
- ಪ್ರಕರಣದಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಎಫ್.ಎಸ್.ಎಲ್ ತಜ್ಞರು ಹಾಗೂ ಸಿ.ಎಫ್.ಎಸ್.ಎಲ್ ತಜ್ಞರಲ್ಲಿಗೆ ಪರೀಕ್ಷೆಗಾಗಿ ಕಳುಹಿಸಿದ್ದು, ವರದಿಗಳು ಬರಬೇಕಾಗಿದೆ.
- ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ವಾಹನಗಳಲ್ಲಿ ದೊರೆತಿದ್ದ ಆಕಸ್ಮಿಕ ಫಿಂಗರ್ ಪ್ರಿಂಟ್ಗಳ ಬಗ್ಗೆ ನಗರ ಬೆರಳು ಮುದ್ರೆ ಘಟಕದಿಂದ ವರದಿ ಬರಬೇಕಾಗಿದೆ.
- ಪ್ರಕರಣದ ಎ1 ರಿಂದ ಎ17 ಆರೋಪಿಗಳು ಅಪಹರಣ, ಕೊಲೆ, ಒಳ ಸಂಚು ಮತ್ತು ಸಾಕ್ಷಿನಾಶಪಡಿಸಿದಂತೆ ಒಂದು ಗಂಭೀರ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವುದು ಇದುವರೆಗೂ ಸಂಗ್ರಹಿಸಿದ ಪ್ರತ್ಯಕ್ಷ ಸಾಕ್ಷಿದಾರರ ಹೇಳಿಕೆ, ತಾಂತ್ರಿಕ ಮತ್ತು ಭೌತಿಕ ಸಾಕ್ಷಾಧಾರಗಳಿಂದ ದೃಢಪಟ್ಟಿದೆ.
- ಕೇಸ್ ಹಾಲಿ ತನಿಖೆಯಲ್ಲಿದ್ದು, ಪ್ರಕರಣದಲ್ಲಿ ಎಲ್ಲಾ ಆರೋಪಿಗಳ ಕೃತ್ಯದಲ್ಲಿನ ಅವರ ಸಂಪೂರ್ಣ ಪಾತ್ರದ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಯಬೇಕಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಈ ಹಂತದಲ್ಲಿ ಜಾಮೀನು ನೀಡಬಾರದು ಎಂದು ಸರ್ಕಾರಿ ಪರ ಅಭಿಯೋಜಕರು ವಾದಿಸಿದರು.
ಇದನ್ನೂ ಓದಿ:ಹುಬ್ಬಳ್ಳಿ ಶ್ರೀಸಿದ್ದಾರೂಢ ಮಠದ ಧರ್ಮದರ್ಶಿಯಿಂದ ದರ್ಶನ್ಗೆ ಸಿದ್ದಾರೂಢರ ಚರಿತ್ರೆ ಪುಸ್ತಕ ರವಾನೆ - Siddharoodha Charitre to Darshan