ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಯಶಸ್ಸಿನಲೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಮ್ಮ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಸಹನಟ ರಣ್ಬೀರ್ ಕಪೂರ್ ಅವರ ಜೊತೆ ಹಿಮದಿಂದ ಆವೃತವಾಗಿರುವ ಮನಾಲಿಯಲ್ಲಿ ನಡೆದ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಹುವಾ ಮೈನ್ ಹಾಡನ್ನು ಹಿಮಾವೃತ ಪ್ರದೇಶದಲ್ಲಿ ಚಿತ್ರೀಕರಿಸಲಾಗಿತ್ತು. ರಶ್ಮಿಕಾ ಮತ್ತು ರಣ್ಬೀರ್ ಅವರ ಮದುವೆ ದೃಶ್ಯವನ್ನು ಮನಾಲಿಯಲ್ಲಿ ಸೆರೆಹಿಡಿಯಲಾಗಿತ್ತು. ನಟಿ ಸೀರೆ ಮತ್ತು ಕುರ್ತಾ ಉಡುಪು ಧರಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಈ ಬಗ್ಗೆ ಮಾತನಾಡಿದ್ದಾರೆ.
ಹಿಮಾವೃತ ಪ್ರದೇಶದಲ್ಲಿ, ಮೈ ಕೊರೆಯುವ ಚಳಿಯಲ್ಲಿ ಕೇವಲ ಸೀರೆ ಉಟ್ಟುಕೊಂಡು ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅನುಭವವನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ. ಮನಾಲಿಯ ಚಳಿಯಲ್ಲಿ ನಾನು ಮಾತ್ರವಲ್ಲ, ರಣ್ಬೀರ್ ಕೂಡ ತೆಳು ಉಡುಪು ಧರಿಸಿದ್ದಕ್ಕೆ ನನಗೆ ಸಮಾಧಾನವಾಗಿತ್ತು ಎಂದು ತಿಳಿಸಿದರು. ''ಈ ಇಬ್ಬರೂ (ಚಿತ್ರದ ಪ್ರಮುಖ ಪಾತ್ರಧಾರಿಗಳು) ಮನೆಯಿಂದ ಓಡಿಹೋಗಿ ಅಸಾಮಾನ್ಯ ಸ್ಥಳದಲ್ಲಿ ಮದುವೆಯಾಗುವ ಸೀನ್ ಅನ್ನು ನಿರ್ದೇಶಕರು ಬಯಸಿದ್ದರು. ಕೇವಲ ಸೀರೆ ಉಟ್ಟುಕೊಂಡಾಗ ನಾನು ಮಾತ್ರ ಚಳಿ ಅನುಭವಿಸಿಲ್ಲ, ಅವರೂ (ರಣ್ಬೀರ್) ಕೂಡ ಚಳಿಯಲ್ಲಿ ನಡುಗುತ್ತಿದ್ದಾರೆ ಎಂಬುದನ್ನು ತಿಳಿದ ನನಗೆ ಒಳಗೊಳಗೆ ಸಮಾಧಾನವಾಗಿತ್ತು'' ಎಂದು ತಮಾಷೆಯಾಗಿ ಟೀಕಿಸಿದರು.
ಹಿಮಾವೃತ ಪ್ರದೇಶದಲ್ಲಿ ಶೂಟಿಂಗ್ ನಡೆಸುವುದರ ಸುತ್ತಲಿನ ಕಷ್ಟಗಳ ಬಗ್ಗೆ ಕೂಡ ರಶ್ಮಿಕಾ ಚರ್ಚಿಸಿದರು. "ಹಿಮದ ಮೇಲೆ ಹೋದಾಗ, ಚರ್ಮ ಮಸುಕಾಗುತ್ತದೆ. ಹಾಗಾಗಿ, ಮೇಕಪ್ ಆರ್ಟಿಸ್ಟ್ ಕಲಾವಿದರು ಹೆಚ್ಚು ಕಾಂತಿಯುತವಾಗಿ ಕಾಣಲು ಹೆಚ್ಚು ಮೇಕಪ್ ಮಾಡುತ್ತಾರೆ. ನೀವು ಕೋಣೆಯಲ್ಲಿ ಸಿದ್ಧರಾಗಿ ಎಂದು ಹೇಳಿ ಹೋಗುತ್ತಾರೆ. ಮತ್ತೆ ಬಂದು ನೋಡಿದಾಗ ನಮ್ಮ ಮುಖ ಡಲ್ ಆಗಿರುತ್ತದೆ. ಅಷ್ಟೊಂದು ಮೇಕಪ್ ಮಾಡಿದ್ದೇವೆ, ನಿಮ್ಮ ಮೇಕಪ್ ಏನಾಯಿತು ಎಂದು ನಮ್ಮನ್ನು ಪ್ರಶ್ನಿಸುತ್ತಾರೆ. ಆ ಥಂಡಿ, ರಕ್ತದ ಹರಿವನ್ನು ನಿಧಾನಗೊಳಿಸುವ ಹಿನ್ನೆಲೆ ಹೀಗಾಗುತ್ತದೆ'' ಎಂದು ಸಂದರ್ಶನದಲ್ಲಿ ಮಂದಣ್ಣ ವಿವರಿಸಿದರು.