ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನ ದೇಶದ ಅತಿದೊಡ್ಡ ಸಮುದ್ರ ಸೇತುವೆ (ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತುವೆ) ಬಗ್ಗೆ ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಕೆಲಸಗಳ ಬಗ್ಗೆ ಪರೋಕ್ಷ ಗುಣಗಾನ ಮಾಡಿದ್ದರು. ಇದಾದ ಬಳಿಕ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು, ಅಭಿವೃದ್ಧಿಗಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿದ್ದರು.
ಜನವರಿ ಎರಡನೇ ವಾರದಲ್ಲಿ ನರೇಂದ್ರ ಮೋದಿ ಅವರು ಅಟಲ್ ಸೇತುವೆ ಉದ್ಘಾಟಿಸಿದ್ದರು. ಈ ಸೇತುವೆ ಮುಂಬೈ ಸಾರಿಗೆ ವ್ಯವಸ್ಥೆ ಮೇಲೆ ಅದ್ಭುತ ಪರಿಣಾಮ ಬೀರಿದೆ ಎಂದು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತ ಮುನ್ನುಗ್ಗುತ್ತಿದೆ ಎಂದು ಖುಷಿಪಟ್ಟಿದ್ದರು. ಈ ಬೆನ್ನಲ್ಲೇ ನಟ ಹಾಗು ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಪರೋಕ್ಷವಾಗಿ ನಟಿಗೆ ಟಾಂಗ್ ಕೊಟ್ಟಿದ್ದಾರೆ.
ಚೇತನ್ ಅಹಿಂಸಾ ಸೋಷಿಯಲ್ ಮೀಡಿಯಾ ಪೋಸ್ಟ್: 'ಕಳೆದ 10 ವರ್ಷಗಳಲ್ಲಿ, ಭಾರತದ ಆದಾಯ ಅಸಮಾನತೆ ಗಗನಕ್ಕೇರಿದೆ. ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳು ದಾಳಿಗೆ ಒಳಗಾಗಿವೆ. ಯಾವುದೇ ಮೂರ್ಖ ಪಕ್ಷವು ಕಾಂಕ್ರೀಟ್ ಸುರಿಯಬಹುದು ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸಬಹುದು. ಸಮಾಜವನ್ನು ಸುಸ್ಥಿರವಾಗಿ ಮತ್ತು ಸಮಾನವಾಗಿ ಅಭಿವೃದ್ಧಿಪಡಿಸಲು ನಿಜವಾದ ಒಳನೋಟದ ಅಗತ್ಯವಿದೆ. ಸೆಲೆಬ್ರಿಟಿಗಳ ಅಜ್ಞಾನವು ಸವಲತ್ತುಗಳ 'ಫ್ರ್ಯಾಕಿಂಗ್ ಬ್ರಿಲಿಯಂಟ್' ರೂಪವಾಗಿದೆ' ಎಂದು ಬರೆದುಕೊಂಡಿದ್ದಾರೆ.