ರಶ್ಮಿಕಾ ಮಂದಣ್ಣ ಮತ್ತು ಧನುಷ್ ಅಭಿನಯದ ಮುಂಬರುವ ಚಿತ್ರ 'ಕುಬೇರ' ಘೋಷಣೆಯಾದಾಗಿನಿಂದಲೂ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಶೇಖರ್ ಕಮ್ಮುಲ ನಿರ್ದೇಶನದ ಈ ಚಿತ್ರ ದರೋಡೆಕೋರನ ಸುತ್ತ ಸುತ್ತುವ ಕಥೆ ಎಂದು ಹೇಳಲಾಗಿದೆ. ಅಕ್ಕಿನೇನಿ ನಾಗಾರ್ಜುನ ಪ್ರಮುಖ ಪಾತ್ರ ವಹಿಸಿದ್ದಾರೆ. ನಾಯಕ ನಟಿ ರಶ್ಮಿಕಾ ಇಂದು ಮುಂಜಾನೆ ಕುಬೇರ ಸೆಟ್‌ನಿಂದ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ, ಆಕಾಶದ ಫೋಟೋ ಹಂಚಿಕೊಂಡಿದ್ದಾರೆ. "ಅಂಡ್, ಇಟ್ಸ್ ಪ್ಯಾಕ್ ಅಪ್! ಕುಬೇರ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಸ್ಟೋರಿ ಶೇರ್ ಮಾಡುವುದರ ಮೂಲಕ 'ಕುಬೇರ' ನಿರ್ಮಾಣ ಹಂತಕ್ಕೆ ತಲುಪಿದೆ ಎಂಬುದನ್ನು ನಟಿ ಖಚಿತಪಡಿಸಿದ್ದಾರೆ.
ಇತ್ತೀಚೆಗೆ 'ಕುಬೇರ'ನ ಶೂಟಿಂಗ್ ಅಧಿಕೃತವಾಗಿ ಮುಂಬೈನಲ್ಲಿ ಪ್ರಮುಖ ತಾರೆಯರೊಂದಿಗೆ ಪ್ರಾರಂಭವಾಯಿತು ಎಂದು ವರದಿಗಳು ಸೂಚಿಸಿತು. ವರದಿಗಳ ಪ್ರಕಾರ, ಏಪ್ರಿಲ್ 23ರಂದು ಮುಂಬೈನಲ್ಲಿ ಸಸ್ಪೆನ್ಸ್ ಡ್ರಾಮಾದ ಚಿತ್ರೀಕರಣ ಪ್ರಾರಂಭವಾಯಿತು. ರಶ್ಮಿಕಾ ಮಂದಣ್ಣ ಕೂಡ ಧನುಷ್ ಅವರ ಶೂಟಿಂಗ್ ಶೆಡ್ಯೂಲ್‌ಗೆ ಸೇರಿಕೊಂಡಿದ್ದಾರೆ. ಇತರ ಸಿನಿಮಾಗಳ ಶೂಟಿಂಗ್ ಶೆಡ್ಯೂಲ್ ಹಿನ್ನೆಲೆ, ಇವರಿಬ್ಬರ ಸೀಕ್ವೆನ್ಸ್‌ಗಳನ್ನು ಮೊದಲು ಚಿತ್ರೀಕರಿಸಲು ಚಿತ್ರ ತಯಾರಕರು ನಿರ್ಧರಿಸಿದ್ದಾರೆ.
ಹತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ನಾಗಾರ್ಜುನ ಅವರು ರಶ್ಮಿಕಾ ಮತ್ತು ಧನುಷ್ ಅವರೊಂದಿಗೆ ಸದ್ಯದ ಚಿತ್ರೀಕರಣಕ್ಕೆ ಸೇರಿಕೊಳ್ಳುವ ಸಾಧ್ಯತೆಗಳಿವೆ. ಅದಾಗ್ಯೂ, ಶೂಟಿಂಗ್ ಶೆಡ್ಯೂಲ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಚಿತ್ರತಂಡದ ಕಡೆಯಿಂದ ಬಂದಿಲ್ಲ. ವರದಿಗಳ ಪ್ರಕಾರ ಕುಬೇರ ಚಿತ್ರದ ಬಹುತೇಕ ಚಿತ್ರೀಕರಣ ಮುಂಬೈನ ಧಾರಾವಿಯಲ್ಲಿ ನಡೆಯಲಿದೆ.