ನವದೆಹಲಿ: ಡೀಪ್ ಫೇಕ್ ವಿಡಿಯೋ ಸೃಷ್ಟಿಸಿ ವೈರಲ್ ಮಾಡಿರುವ ಆರೋಪಿಯನ್ನು ದೆಹಲಿ ಪೊಲೀಸರು ಇತ್ತೀಚಿಗೆ ಬಂಧಿಸಿದ್ದು, ನಟಿ ರಶ್ಮಿಕಾ ಮಂದಣ್ಣ ಧನ್ಯವಾದ ಅರ್ಪಿಸಿದ್ದಾರೆ. ವಿಡಿಯೋ ಮತ್ತು ಫೋಟೋಗಳನ್ನು ಮಾರ್ಫಿಂಗ್ ಮಾಡುವ ಜನರ ಬಗ್ಗೆ ಯುವಜನತೆ ಜಾಗರೂಕರಾಗಿರಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಜನರ ಪ್ರೀತಿ ಖುಷಿ ತಂದಿದೆ. ಇಂತಹ ಘಟನೆಗಳು ನಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲು ಇದೊಂದು ನಿದರ್ಶನ. ಫೋಟೋಗಳನ್ನು ಮಾರ್ಫ್ ಮಾಡಿ, ಅನುಮತಿಯಿಲ್ಲದೆ ಬೇರೆಯವರ ಫೋಟೋಗಳನ್ನು ಎಲ್ಲಿಯಾದರೂ ಬಳಸಿದರೆ ಅದು ಅಪರಾಧವಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದಿರಬೇಕು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಕರಣವೇನು?: 2023ರ ಕೊನೆಯಲ್ಲಿ ರಶ್ಮಿಕಾ ಮಂದಣ್ಣರ ನಕಲಿ ವಿಡಿಯೋ ವೈರಲ್ ಆಗಿ ಸಂಚಲನ ಸೃಷ್ಟಿಸಿತ್ತು. ವಿವಿಧ ಕ್ಷೇತ್ರಗಳ ಗಣ್ಯರು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿತ್ತು.
2023ರ ನವೆಂಬರ್ 10ರಂದು ದೆಹಲಿ ಪೊಲೀಸ್ ಇಲಾಖೆಯ ಸ್ಪೆಷಲ್ ಸೆಲ್ನ ಇಂಟೆಲಿಜೆನ್ಸ್ ಫ್ಯೂಷನ್ ಆ್ಯಂಡ್ ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ಘಟಕದಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 (ಫೋರ್ಜರಿಗೆ ಶಿಕ್ಷೆ) ಮತ್ತು 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ನಕಲಿ ನಿರ್ಮಾಣ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಸಿ ಮತ್ತು 66ಇ ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು. ಎಫ್‌ಐಆರ್ ದಾಖಲಿಸಿದ ಕೂಡಲೇ ಐಎಫ್‌ಎಸ್‌ಒ ಯೂನಿಟ್, ಫೇಕ್ ವಿಡಿಯೋದ ಯುಆರ್‌ಎಲ್ ಸೇರಿದಂತೆ ಇತರ ವಿವರಗಳನ್ನು ನೀಡುವಂತೆ ಮೆಟಾ ಸಂಸ್ಥೆಗೆ ಪತ್ರ ಬರೆದಿತ್ತು. ನಕಲಿ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿಯನ್ನು ಕಂಡುಹಿಡಿಯಲು ಈ ಮಾಹಿತಿ ಕೇಳಿತ್ತು.
ಫೇಕ್ ವಿಡಿಯೋ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ತೀವ್ರ ಅಸಮಾಧಾನ ಹೊರಹಾಕಿದ್ದರು. ನಕಲಿ ವಿಡಿಯೋ ಕಂಡು ನೋವು, ಭಯವೂ ಆಗಿದೆ. ತಂತ್ರಜ್ಞಾನದ ದುರುಪಯೋಗದ ಪರಿಣಾಮ ನನ್ನಂತೆಯೇ ಅನೇಕರಿಗೆ ನೋವಾಗಿರಬಹುದು. ವಿದ್ಯಾಭ್ಯಾಸದ ಸಂದರ್ಭದಲ್ಲಿ ಹೀಗಾಗಿದ್ದರೆ ಹೇಗೆ ನಿಭಾಯಿಸುತ್ತಿದ್ದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಕೃತಜ್ಞಳಾಗಿದ್ದೇನೆ. ಇದಕ್ಕೆ ತುರ್ತು ಪರಿಹಾರ ಕಂಡುಕೊಳ್ಳಬೇಕಿದೆ ಎಂಬ ಪೋಸ್ಟ್ ಶೇರ್ ಮಾಡಿದ್ದರು.
ರಶ್ಮಿಕಾ ಮಂದಣ್ಣ ಸಿನಿಮಾಗಳು: ಇತ್ತೀಚೆಗೆ ತೆರೆಕಂಡ 'ಅನಿಮಲ್' ಸೂಪರ್ ಹಿಟ್ ಆಗಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸಿನಿಮಾದಲ್ಲಿ ರಣ್ಬೀರ್ ಕಪೂರ್ ಜೊತೆ ಅವರು ತೆರೆ ಹಂಚಿಕೊಂಡಿದ್ದರು. ತೃಪ್ತಿ ಡಿಮ್ರಿ, ಅನಿಲ್ ಕಪೂರ್, ಸನ್ನಿ ಡಿಯೋಲ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. 'ಪುಷ್ಪ 2' ರಶ್ಮಿಕಾರ ಮುಂದಿನ ಬಹುನಿರೀಕ್ಷಿತ ಸಿನಿಮಾ. 'ದಿ ಗರ್ಲ್ಫ್ರೆಂಡ್', 'ರೈನ್ಬೋ' ಪ್ರಾಜೆಕ್ಟ್ ಕೂಡ ಹೊಂದಿದ್ದಾರೆ.
ಇದನ್ನೂ ಓದಿ:ರಶ್ಮಿಕಾ - ವಿಜಯ್ ನಿಶ್ಚಿತಾರ್ಥ ಕುರಿತು ಮೌನ ಮುರಿದ ನಟ; ಹೇಳಿದ್ದೇನು?