ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಪ್ರಿಯರಲ್ಲಿ ಬಹುನಿರೀಕ್ಷೆ ಹುಟ್ಟುಹಾಕಿರುವ ಚಿತ್ರ. ಅಧಿಕೃತವಾಗಿ ಘೋಷಣೆಯಾಗದಿದ್ದರೂ ಸಿನಿಮಾ ಸುತ್ತಲಿನ ಮಾಹಿತಿ ಜೋರಾಗೇ ಕೇಳಿಬರುತ್ತಿದೆ. ದಿನಕ್ಕೊಂದು ಸುದ್ದಿ ಹೊರಬರುತ್ತಿದ್ದು, ಕೆಲ ಫೋಟೋಗಳು ಕೂಡ ಆ ಅಂತೆಕಂತೆಗಳಿಗೆ ತುಪ್ಪ ಸುರಿಯುತ್ತಿದೆ. ರಾಮನವಮಿ ಸಂದರ್ಭ ಚಿತ್ರ ಘೋಷಣೆಯಾಗುವ ಸಾಧ್ಯತೆಗಳಿವೆ.
ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ಭಗವಾನ್ ಶ್ರೀರಾಮನ ಪಾತ್ರದಲ್ಲಿ, ದಕ್ಷಿಣ ಚಿತ್ರರಂಗದ ಚೆಲುವೆ ಸಾಯಿ ಪಲ್ಲವಿ ದೇವಿ ಸೀತೆ ಪಾತ್ರದಲ್ಲಿ ಮತ್ತು ರಾವಣನ ಪಾತ್ರದಲ್ಲಿ ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಬಹಳ ದಿನಗಳಿಂದ ಸದ್ದು ಮಾಡುತ್ತಿರುವ ವಿಚಾರ. ಇತ್ತೀಚೆಗಷ್ಟೇ, ಬರುವ ತಿಂಗಳಿನಿಂದ ಶೂಟಿಂಗ್ ಪ್ರಾರಂಭಿಸಲು ಸಿದ್ದರಾಗಿರೋ ಹಿನ್ನೆಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಈ ಕಲಾವಿದರು ಸೀಮಿತಗೊಳಿಸುತ್ತಿದ್ದಾರೆ ಎಂದು ಹೇಳಲಾಯ್ತು. ಅಲ್ಲದೇ ರಣ್ಬೀರ್ ಕಪೂರ್ ಅವರ ಹೆಡ್‌ಸ್ಟ್ಯಾಂಡ್ ಫೋಟೋ ಕೂಡ ವೈರಲ್ ಆಗಿತ್ತು. ಇದೀಗ ರಣ್ಬೀರ್ ಅವರ ಮತ್ತೊಂದು ಫೋಟೋ ವೈರಲ್ ಆಗಿದ್ದು, 'ರಾಮಾಯಣ'ದ ಸುತ್ತಲಿರುವುದು ಕೇವಲ ವದಂತಿಗಳಲ್ಲ ಎಂಬುದು ನೆಟ್ಟಿಗರ ಅಭಿಪ್ರಾಯ.
ಭಗವಾನ್ ರಾಮನನ್ನು ಚಿತ್ರಿಸಲು ರಣ್ಬೀರ್ ಕಪೂರ್ ಸಜ್ಜಾಗುತ್ತಿದ್ದಾರೆ. ಅವರ ಪಾತ್ರದ ಸುತ್ತಲಿನ ಹಲವು ಅಂತೆಕಂತೆಗಳ ನಡುವೆ ಪಾತ್ರಕ್ಕಾಗಿ ಶ್ರದ್ಧೆಯಿಂದ ತಯಾರಿ ನಡೆಸುತ್ತಿರೋ ಮತ್ತೊಂದು ಫೋಟೋ ವೈರಲ್ ಆಗಿದೆ. ಲೇಟೆಸ್ಟ್ ಫೋಟೋಗಳು ಅಭಿಮಾನಿಗಳಲ್ಲಿ ಉತ್ಸಾಹ ಹುಟ್ಟುಹಾಕಿದೆ. ಆರ್ಚರಿ (ಬಿಲ್ಲುಗಾರಿಕೆ) ಸೇರಿದಂತೆ ನಟನ ಕಠಿಣ ತರಬೇತಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.
ಲೇಟೆಸ್ಟ್ ಪೋಸ್ಟ್‌ನಲ್ಲಿ ರಣ್ಬೀರ್ ಕಪೂರ್ ಬಿಲ್ಲುಗಾರಿಕೆ ತರಬೇತುದಾರನ (archery coach) ಜೊತೆ ಕಾಣಿಸಿಕೊಂಡಿದ್ದಾರೆ. ಇದು ಭಗವಾನ್ ರಾಮನ ಪಾತ್ರಕ್ಕೆ ತಯಾರಿ ಎಂಬುದನ್ನು ಸ್ಪಷ್ಟವಾಗಿ ಸೂಚಿಸಿದೆ. ಅದ್ಭುತ ಪಾತ್ರದ ಮೇಲಿನ ನಟನ ಬದ್ಧತೆಯನ್ನು ಎತ್ತಿ ಹಿಡಿದಿದೆ. ತೆರೆಮರೆಯ ಈ ಸೀನ್ಗಳು ಅಭಿಮಾನಿಗಳಿಗೆ, ಸಿನಿಪ್ರಿಯರಿಗೆ ಕಪೂರ್ ಪ್ರಯಾಣದ ಒಂದು ನೋಟ ಒದಗಿಸಿದೆ.