ರಮಾನಂದ್ ಸಾಗರ್ ಅವರ 'ರಾಮಾಯಣ'ದಲ್ಲಿ ಲಕ್ಷ್ಮಣನ ಪಾತ್ರ ವಹಿಸಿದ್ದ ನಟ ಸುನಿಲ್ ಲಹ್ರಿ ಅವರು 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಬಹುಮತ ಪಡೆಯಲು ವಿಫಲವಾಗಿದೆ ಎಂದು ಉಲ್ಲೇಖಿಸಿ, ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
ಇತ್ತೀಚೆಗೆ ಶೇರ್ ಮಾಡಿರುವ ವಿಡಿಯೋದಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಡೆತಡೆಗಳನ್ನು ಎದುರಿಸದೇ ತನ್ನ ಅವಧಿಯನ್ನು ಪೂರ್ಣಗೊಳಿಸಬಹುದೇ ಎಂಬುದಾಗಿಯೂ ಪ್ರಶ್ನಿಸಿದ್ದಾರೆ.
ವಿಡಿಯೋದಲ್ಲೇನಿದೆ? ''2024ರ ಲೋಕಸಭಾ ಚುನಾವಣೆಯ ಫಲಿತಾಂಶದಿಂದ ನಿರಾಶೆಗೊಂಡಿದ್ದೇನೆ. ಮತದಾನ ಕಡಿಮೆಯಾಗಿದೆ. ಅಲ್ಲದೇ ಫಲಿತಾಂಶ ಈ ರೀತಿ ಇದೆ. ಈ ಸರ್ಕಾರ ಐದು ವರ್ಷ ಸುಗಮವಾಗಿ ಸಾಗಲು ಸಾಧ್ಯವೇ?'' ಎಂದು ಪ್ರಶ್ನಿಸಿದ್ದಾರೆ.
ಫೈಜಾಬಾದ್ ಲೋಕಸಭಾ ಕ್ಷೇತ್ರದ ಅಯೋಧ್ಯೆಯ ಮತದಾರರನ್ನು ಸಹ ನಟ ಟೀಕಿಸಿದ್ದಾರೆ. ಇಲ್ಲಿ, ಸಮಾಜವಾದಿ ಪಕ್ಷದ ಅವದೇಶ್ ಪ್ರಸಾದ್ ಗೆಲುವಿನ ನಗೆ ಬೀರಿದ್ದು, ಬಿಜೆಪಿಯ ಲಲ್ಲು ಸಿಂಗ್ 59,000 ಮತಗಳ ಅಂತರದಿಂದ ಸೋಲಿನ ರುಚಿ ಕಂಡಿದ್ದಾರೆ. ನಗರದ ಇತಿಹಾಸ ಮತ್ತು ಪ್ರಸ್ತುತ ರಾಜಕೀಯ ಆಯ್ಕೆ ಬಗ್ಗೆ ಒತ್ತಿ ಹೇಳಿದ್ದಾರೆ. ಅಯೋಧ್ಯೆ ನಿವಾಸಿಗಳು ತಮ್ಮ ನಾಯಕರಿಗೆ ದ್ರೋಹ ಮಾಡುವ ಪ್ರವೃತ್ತಿಯನ್ನು ಹೊಂದಿದ್ದಾರೆಂದು ತಿಳಿಸಿದರು.