ಅಲ್ಲು ಅರ್ಜುನ್ ಮುಖ್ಯಭೂಮಿಕೆಯ ಬ್ಲಾಕ್‌ಬಸ್ಟರ್ 'ಪುಷ್ಪ 2: ದಿ ರೂಲ್' ನಂತರ, ತೆಲುಗು ಚಿತ್ರರಂಗದಿಂದ ಮತ್ತೋರ್ವ ಸೂಪರ್ ಸ್ಟಾರ್ ರಾಮ್ ಚರಣ್ ಅಭಿನಯದ 'ಗೇಮ್ ಚೇಂಜರ್' ಇಂದು ಅದ್ಧೂರಿಯಾಗಿ ತೆರೆಗಪ್ಪಳಿಸಿದೆ.
ಹೊಸ ವರ್ಷದಲ್ಲಿ ತಮ್ಮ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಆರ್‌ಆರ್‌ಆರ್ ಸ್ಟಾರ್ ಶುರು ಮಾಡಿದ್ದಾರೆ. ಖ್ಯಾತ ನಿರ್ದೆಶಕ ಎಸ್.ಶಂಕರ್ ನೇತೃತ್ವದಲ್ಲಿ ಬಂದಿರುವ ಗೇಮ್ ಚೇಂಜರ್ ಚಿತ್ರದಲ್ಲಿ ರಾಮ್ ಚರಣ್ ಜೊತೆಗೆ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಆರಂಭಿಕವಾಗಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ರಾಮ್ ಚರಣ್ ಸೋಲೋ ಹೀರೋ ಆಗಿ ನಾಲ್ಕು ವರ್ಷಗಳ ಬಳಿಕ ತೆರೆಮೇಲೆ ಕಾಣಿಸಿಕೊಂಡಿರುವುದಿಂದ ಚಿತ್ರದ ಪ್ರೀ ಬ್ಯುಸಿನೆಸ್ ಕೂಡಾ ಉತ್ತಮವಾಗಿದೆ.
ಗೇಮ್ ಚೇಂಜರ್ ಕಲೆಕ್ಷನ್ ಅಂದಾಜು (ಮೊದಲ ದಿನ): ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಗೇಮ್ ಚೇಂಜರ್ ಚಿತ್ರದ ಮೊದಲ ದಿನದ ಅಡ್ವಾನ್ಸ್ ಬುಕಿಂಗ್ ಎಲ್ಲಾ ಭಾಷೆ ಒಳಗೊಂಡಂತೆ 43.55 ಕೋಟಿ ರೂ.ಗಳನ್ನು ದಾಟಿದೆ. ಮತ್ತೊಂದೆಡೆ, ಸಿನಿಮಾ ವ್ಯವಹಾರ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಅವರು ವಿಶ್ವಾದ್ಯಂತ ಚಿತ್ರ 65 ಕೋಟಿ ರೂ.ಗಳನ್ನು ದಾಟಲಿದೆ ಎಂದು ತಿಳಿಸಿದ್ದಾರೆ. ಗೇಮ್ ಚೇಂಜರ್ ಈ ಅಂದಾಜುಗಳನ್ನು ಮೀರುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿವೆ.
ರಾಮ್ ಚರಣ್ ಮತ್ತು ನಿರ್ದೇಶಕ ಶಂಕರ್ ಕಾಂಬಿನೇಶನ್ನ ಮೊದಲ ಸಿನಿಮಾ ಇದು. ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ನ ವಿಜಯ ನಟ ನಿರ್ದೇಶಕರಿಬ್ಬರಿಗೂ ಮಹತ್ವದ್ದು. ಏಕೆಂದರೆ ಆಸ್ಕರ್ ವೇದಿಕೆ ಏರಿದ್ದ ಆರ್‌ಆರ್‌ಆರ್ ಬಳಿಕ ಬರುತ್ತಿರುವ ರಾಮ್ ಚರಣ್ ಅವರ ಮೊದಲ ಸಿನಿಮಾ ಆಗಿರುವ ಹಿನ್ನೆಲೆಯಲ್ಲಿ ಸೋಲೋ ಸ್ಟಾರ್ ಪವರ್ ಸಾಬೀತುಪಡಿಸಿಕೊಳ್ಳಬೇಕಿದೆ.