ಭಾರತೀಯ ಚಿತ್ರರಂಗದ ಬ್ಲಾಕ್ಬಸ್ಟರ್ ಸಿನಿಮಾ 'ಆರ್ಆರ್ಆರ್' ಮೂಲಕ ವಿಶ್ವವಿಖ್ಯಾತರಾಗಿರುವ ರಾಮ್ ಚರಣ್ ನಟನೆಯ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. 'ಗೇಮ್ ಚೇಂಜರ್' ಜೊತೆ ಮುಂದಿನ ಮತ್ತೊಂದು ಚಿತ್ರ 'RC16' ಬಗ್ಗೆ ಕುತೂಹಲ ವ್ಯಕ್ತವಾಗುತ್ತಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಶಂಕರ್ ನಿರ್ದೇಶನದ ಪೊಲಿಟಿಕಲ್ ಡ್ರಾಮಾ ''ಗೇಮ್ ಚೇಂಜರ್'' ಚಿತ್ರೀಕರಣ ಚುರುಕುಗೊಂಡಿದ್ದು, 'ಆರ್‌ಸಿ 16' ಸಂಬಂಧ ಅಧಿಕೃತ ಮಾಹಿತಿ ಕೊಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
ತಾತ್ಕಾಲಿಕ ಶೀರ್ಷಿಕೆಯ 'RC16' ಸಿನಿಮಾವನ್ನು ಬುಚಿ ಬಾಬು ಸನಾ ನಿರ್ದೇಶಿಸಲಿದ್ದಾರೆ. ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ಚಿತ್ರದ ನಾಯಕ ನಟಿ. ಇದೇ ಮೊದಲ ಬಾರಿ ರಾಮ್ ಚರಣ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್ ಕೂಡ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಸಿನಿಮಾ ಸುತ್ತಲಿರುವ ಲೇಟೆಸ್ಟ್ ಮಾಹಿತಿ ಪ್ರಕಾರ, ಇದೇ ಮಾರ್ಚ್ 20ರಂದು ಹೈದರಾಬಾದ್‌ನಲ್ಲಿ ವಿಶೇಷ ಪೂಜಾ ಸಮಾರಂಭದೊಂದಿಗೆ ಆರ್‌ಸಿ 16 ಸೆಟ್ಟೇರಲಿದೆ. ಮುಂದಿನ ದಿನಗಳಲ್ಲಿ, ಜಾಹ್ನವಿ ಮತ್ತು ರಾಮ್ ಚರಣ್ ಸೇರಿದಂತೆ ಚಿತ್ರತಂಡ ತಮ್ಮ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸುವ ಸಾಧ್ಯತೆ ಇದೆ. ಸಿನಿಪ್ರಿಯರು ಹೆಚ್ಚಿನ ಅಧಿಕೃತ ಮಾಹಿತಿ ನಿರೀಕ್ಷಿಸಿದ್ದಾರೆ.