ಕಾಯುವಿಕೆ ಕೊನೆಗೊಂಡಿದೆ. ಬ್ಲಾಕ್ಬಸ್ಟರ್ 'ಆರ್ಆರ್ಅರ್' ಮೂಲಕ ವಿಶ್ವದಾದ್ಯಂತ ಸದ್ದು ಮಾಡಿದ ಚಿರಂಜೀವಿ ಪುತ್ರ ರಾಮ್ ಚರಣ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ 'ಗೇಮ್ ಚೇಂಜರ್' ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಬಿಡುಗಡೆ ಹೊಸ್ತಿಲಲ್ಲಿರುವ ಸಿನಿಮಾ ಪ್ರಚಾರ ಶುರು ಮಾಡಿದ್ದು, ಟ್ರೇಲರ್ ಸಿನಿಪ್ರಿಯರನ್ನು ಚಿತ್ರಮಂದಿರಕ್ಕೆ ಆಹ್ವಾನಿಸಿದೆ. ಆಸ್ಕರ್ ವೇದಿಕೆ ಹತ್ತಿದ್ದ 'ಆರ್ಆರ್ಆರ್' ಬಳಿಕ ಬರುತ್ತಿರುವ ರಾಮ್ ಚರಣ್ ನಟನೆಯ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ.
ಅಮೆರಿಕದ ಡಲ್ಲಾಸ್‌ನಲ್ಲಿರುವ ಕರ್ಟಿಸ್ ಕಲ್ವೆಲ್ ಸೆಂಟರ್‌ನಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್ ನಂತರ, ಚಿತ್ರ ತಯಾರಕರು ಟ್ರೇಲರ್ನೊಂದಿಗೆ ಅಭಿಮಾನಿಗಳೆದುರು ಬಂದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳ ಮೂರು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ರಾಮ್ ಚರಣ್ ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಸಾಗರೋತ್ತರ ಪ್ರದೇಶದಲ್ಲಿ ಈಗಾಗಲೇ ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ.
ಬಹುನಿರೀಕ್ಷಿತ ಚಿತ್ರ ಇದೇ ಜನವರಿ 10ರಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ. ದಕ್ಷಿಣ ಚಿತ್ರರಂಗದ ಹೆಸರಾಂತ ಎಸ್ ಶಂಕರ್ ನಿರ್ದೇಶನದ 'ಗೇಮ್ ಚೇಂಜರ್'ನಲ್ಲಿ ರಾಮ್ ಚರಣ್ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ತೆರೆಹಂಚಿಕೊಂಡಿದ್ದಾರೆ. ಎಸ್‌ಜೆ ಸೂರ್ಯ, ನಾಸರ್, ಸುನಿಲ್, ಪ್ರಕಾಶ್ ರಾಜ್ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾಂಗ್ಸ್, ಪೋಸ್ಟರ್ಸ್ ಅಲ್ಲದೇ ನಾಯಕ ನಟ ರಾಮ್ ಚರಣ್ ಅವರನ್ನೊಳಗೊಂಡ ಒಳಗೊಂಡ ವಿವಿಧ ಪ್ರೀ-ರಿಲೀಸ್ ಈವೆಂಟ್ಗಳೊಂದಿಗೆ ಚಿತ್ರದ ಪ್ರಚಾರ ಉತ್ತಮವಾಗಿ ಸಾಗಿದೆ.