ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ಹಾಗೂ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ತೆರೆಹಂಚಿಕೊಂಡಿರುವ ಬಹುನಿರೀಕ್ಷಿತ ಚಿತ್ರ 'ಗೇಮ್ ಚೇಂಜರ್'. ವಿಶ್ವಾದ್ಯಂತ ಸದ್ದು ಮಾಡಿ ಆಸ್ಕರ್ ವೇದಿಕೆಯಲ್ಲಿ ರಾರಾಜಿಸಿದ ಆರ್ಆರ್ಆರ್ ಬಳಿಕ ಬರುತ್ತಿರುವ ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟನ ಬಹುನಿರೀಕ್ಷಿತ ಸಿನಿಮಾವಿದು. ಚಿತ್ರ ತಯಾರಕರಿಂದು ಟೀಸರ್ ಅನಾವರಣಗೊಳಿಸೋ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ.
ಎಸ್ ಶಂಕರ್ ನಿರ್ದೇಶನದ ಈ ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಅದ್ಭುತ ಸಿನಿಮೀಯ ಅನುಭವ ನೀಡುವ ಭರವಸೆ ಇದೆ. ಪವರ್ಫುಲ್ ಸ್ಟೋರಿ ಟೆಲ್ಲಿಂಗ್ ಹಾಗೂ ಹೈ ಆಕ್ಟೇನ್ ಆ್ಯಕ್ಷನ್ ಈ ಸಿನಿಮಾದ ಗಮನಾರ್ಹ ಅಂಶ ಎಂದು ನಂಬಲಾಗಿದೆ.
ಟೀಸರ್ ಶಕ್ತಿಯುತ ಕಥಾಹಂದರದ ಒಂದು ಸುಳಿವು ಬಿಟ್ಟುಕೊಟ್ಟಿದೆ. ಸಮಾಜದಲ್ಲಿ ಬೇರೂರಿರುವ, ಸಾಮಾನ್ಯ ಜನರನ್ನು ಪೀಡಿಸುವ ರಾಜಕೀಯ ಭ್ರಷ್ಟಾಚಾರದಂತಹ ದುಷ್ಟತನವನ್ನು ಎದುರಿಸುವ ಐಎಎಸ್ ಅಧಿಕಾರಿಯಾಗಿ ಸೌತ್ ಸಿನಿಮಾ ಸೂಪರ್ ಸ್ಟಾರ್ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದಾರೆ. ಉತ್ತಮ, ಪಾರದರ್ಶಕ ಆಡಳಿತವನ್ನು ಪ್ರಾರಂಭಿಸಲು ನಿರ್ಧರಿಸಿದ ಅವರ ಪಾತ್ರ ಸಮಾಜವನ್ನು ಪರಿವರ್ತಿಸಲು ನ್ಯಾಯಯುತ ಚುನಾವಣಾ ತಂತ್ರಗಳೆಡೆಗೆ ಗಮನ ಕೊಡುತ್ತದೆ. ಟೀಸರ್ ಕೆಲ ರೋಮಾಂಚಕ ದೃಶ್ಯಗಳನ್ನು ಒದಗಿಸಿದೆ. ರಾಮ್ ಚರಣ್ ತಮ್ಮ ಸಂಕಲ್ಪದಿಂದ ಗೂಂಡಾಗಳ ಗುಂಪನ್ನು ಎದುರಿಸುವ ಪಾತ್ರದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದು, ಸಂಪೂರ್ಣ ಸಿನಿಮಾ ವೀಕ್ಷಿಸುವ ಅವರ ಕಾತರವನ್ನು ಹೆಚ್ಚಿಸಿದೆ.
ರಾಮ್ ಚರಣ್ ಅವರ ಪಾತ್ರ ಅಕರ್ಷಕ, ಸ್ಟೈಲಿಶ್ ಹಾಗೂ ಪವರ್ಫುಲ್ ಆಗಿದೆ. ಭವ್ಯ ದೃಶ್ಯ, ನೃತ್ಯ ಸಂಯೋಜನೆ, ಆ್ಯಕ್ಷನ್ ಸೇರಿದಂತೆ ಪ್ರತೀ ಫ್ರೇಮ್ಗಳಲ್ಲಿಯೂ ರಾಮ್ ಚರಣ್ ಅವರ ಉಪಸ್ಥಿತಿಯು ಡೈನಾಮಿಕ್ ಆಗಿರಲಿದೆ ಎಂದು ನಂಬಲಾಗಿದ್ದು, ಸಿನಿಮಾ ಹೇಗೆ ಮೂಡಿಬರಲಿದೆ ಎಂಬ ಕಾತರ ಬಹುತೇಕರಲ್ಲಿದೆ.