ಮೈಸೂರು:'ಫಸ್ಟ್ ರ್‍ಯಾಂಕ್ ರಾಜು' ಖ್ಯಾತಿಯ ನಟ ಗುರುನಂದನ್ ಅಭಿನಯದ 'ರಾಜು ಜೇಮ್ಸ್ ಬಾಂಡ್' ಸಿನಿಮಾ ಫೆ.14ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಕುರಿತು ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ಮಾಹಿತಿ ನೀಡಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸತ್ಯ ಪಿಕ್ಚರ್ಸ್ ಮೂಲಕ ರಾಜ್ಯಾದ್ಯಂತ 200ಕ್ಕೂ ಅಧಿಕ ಟಾಕೀಸ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಹುಬ್ಬಳ್ಳಿಯ ಮೃದುಲಾ ಸಿನಿಮಾದ ನಾಯಕಿ. ಲಂಡನ್ನಲ್ಲಿ ನೆಲೆಸಿರುವ ಕರ್ನಾಟಕದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಬರ್ತೂರ್ ಸಿನಿಮಾ ನಿರ್ಮಿಸಿದ್ದಾರೆ" ಎಂದು ಹೇಳಿದರು.
ನಟ ಗುರುನಂದನ್ ಮಾತನಾಡಿ, "ಈ ಹಿಂದೆ ನಾನು ಮಾಡಿದ ಚಿತ್ರಗಳಿಗಿಂತಲೂ ಈ ಚಿತ್ರದ ಪಾತ್ರ ವಿಭಿನ್ನವಾಗಿದೆ. ಸಂಡೂರು ಹಾಗೂ ವಿದೇಶದಲ್ಲಿಯೂ ಚಿತ್ರೀಕರಿಸಲಾಗಿದೆ. ಈಗಾಗಲೇ ಚಿತ್ರದ ಟ್ರೇಲರ್, ಗೀತೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರವಿಶಂಕರ್, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಜೈಜಗದೀಶ್, ತಬಲಾ ನಾಣಿ, ಮಂಜುನಾಥ್ ಹೆಗಡೆ, ವಿಜಯ್ ಚೆಂಡೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ" ಎಂದರು.