'ಜೈಲರ್' ಮೂಲಕ ಹಲವು ದಾಖಲೆಗಳನ್ನು ಪುಡಿಗಟ್ಟಿರುವ ಭಾರತೀಯ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್ ಅವರೀಗ 'ಕೂಲಿ' ಸಿನಿಮಾದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ವಿಕ್ರಮ್ ಮತ್ತು ದಳಪತಿ ವಿಜಯ್ ಅವರ ಲಿಯೋ, ಮಾಸ್ಟರ್‌ನಂತಹ ಸೂಪರ್ ಹಿಟ್ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ಅವರೊಂದಿಗೆ ಕೈ ಜೋಡಿಸಿದ್ದು, ಚಿತ್ರವನ್ನು ಈವರೆಗೆ 'ತಲೈವರ್ 171' ಎಂದು ಕರೆಯಲಾಗುತ್ತಿತ್ತು. ಇದೀಗ ಚಿತ್ರದ ಟೈಟಲ್ ಅನ್ನು ಬಹಿರಂಗಪಡಿಸುವ ಆ್ಯಕ್ಷನ್-ಪ್ಯಾಕ್ಡ್ ಟೀಸರ್ ಅನ್ನು ಚಿತ್ರತಂಡ ಅನಾವರಣಗೊಳಿಸಿದೆ. 'ಕೂಲಿ' ಶೀರ್ಷಿಕೆ ಪ್ರೇಕ್ಷಕರ ಗಮನ ಸೆಳೆದಿದೆ.
ಬಹುನಿರೀಕ್ಷಿತ ಚಿತ್ರದ ಟೀಸರ್ ಸಿನಿಪ್ರಿಯರು ಮತ್ತು ರಜನಿ ಅಭಿಮಾನಿಗಳಿಂದ ವಿಭಿನ್ನ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಅನೇಕರು, ಈ ಟೀಸರ್ ಎಲ್.ಸಿ.ಯು (ಲೋಕೇಶ್ ಸಿನಿಮಾಟಿಕ್ ಯೂನಿವರ್ಸ್)ನಲ್ಲಿನ ಸಿನಿಮಾಗಳಂತೆಯೇ ತೋರುತ್ತಿದೆ ಎಂದು ಆರೋಪಿಸಿ ನಿರ್ದೇಶಕರನ್ನು ಟೀಕಿಸಿದ್ದಾರೆ. ಮತ್ತೊಂದೆಡೆ, ಅಪಾರ ಸಂಖ್ಯೆಯ ಅಭಿಮಾನಿಗಳು ಟೀಸರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ, ಲೋಕೇಶ್ ಅವರು ರಜನಿಕಾಂತ್‌ನಲ್ಲಿನ ಅತ್ಯುತ್ತಮವಾದದ್ದನ್ನು ಹೊರತರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಟೀಸರ್ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.
ಟೀಸರ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, "ಮತ್ತೊಂದು 1,000 ಕೋಟಿಯ ಸಿನಿಮಾ ಲೋಡಿಂಗ್, ಕೂಲಿ ಟೈಟಲ್ ಟೀಸರ್" ಎಂದು ಬರೆದಿದ್ದಾರೆ. ಮತ್ತೋರ್ವ ಅಭಿಮಾನಿ ಪ್ರತಿಕ್ರಿಯಿಸಿ, "ಕೂಲಿ ಟೈಟಲ್ ಟೀಸರ್ ಇಷ್ಟವಾಯಿತು'' ಎಂದು ಬರೆದಿದ್ದಾರೆ. ಮತ್ತೋರ್ವರು ರಿಯಾಕ್ಟ್ ಮಾಡಿ, 'ಲುಕ್ಸ್ ಕೂಲ್' ಎಂದು ತಿಳಿಸಿದ್ದಾರೆ.