ಲವ್ ಮಾಕ್ಟೇಲ್ ಹಾಗೂ ಲವ್ 360 ಸಿನಿಮಾಗಳಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿಯನ್ನ ಕ್ರಿಯೇಟ್ ಮಾಡಿಕೊಂಡಿರುವ ನಟಿ ರಚನಾ ಇಂದರ್, ಫಸ್ಟ್ ಟೈಮ್ ಮರ್ಡರ್ ಮಿಸ್ಟ್ರಿ ಜೊತೆಗೆ ಇನ್ವೆಸ್ಟಿಗೇಷನ್ ಥ್ರಿಲ್ಲರ್ ಕಥೆಯನ್ನ ಒಳಗೊಂಡಿರುವ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರಕ್ಕೆ 4 ಎನ್ 6 ಟೈಟಲ್ ಇಟ್ಟಿದ್ದು, ಚಿತ್ರದ ಫಸ್ಟ್ ಗ್ಲಿಂಪ್ಸ್ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಚಿತ್ರ ತಂಡದ ಎಲ್ಲ ನಟ-ನಟಿಯರು ಭಾಗಿಯಾಗಿದ್ದರು.
ರಚನಾ ಇಂದರ್ ಹಾಗೂ ಭವಾನಿಪ್ರಕಾಶ್ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರದಲ್ಲಿ ನವೀನ್ ಕುಮಾರ್, ಆದ್ಯ ಶೇಖರ್ ನಟಿಸಿದ್ದಾರೆ. ಈ "4 ಎನ್ 6" ಚಿತ್ರಕ್ಕೆ ದರ್ಶನ್ ಶ್ರೀನಿವಾಸ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೊಲೆಯೊಂದರ ತನಿಖೆಯ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ರಚನಾ ಇಂದರ್ ಇದೇ ಮೊದಲ ಬಾರಿಗೆ ಫೋರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮೊದಲು ಮಾತನಾಡಿದ ನಿರ್ದೇಶಕ ದರ್ಶನ್, ಈ ಹಿಂದೆ 2 ಕಿರುಚಿತ್ರಗಳನ್ನು ನಿರ್ದೇಶಿಸಿದ್ದೆ. ನನ್ನ ಪ್ರಥಮ ನಿರ್ದೇಶನದ ಚಿತ್ರ ಇದಾಗಿದ್ದು, ಕೊಲೆ ಪ್ರಕರಣ ಪತ್ತೆ ಹಚ್ಚುವಲ್ಲಿ ಫೋರೆನ್ಸಿಕ್ ರಿಪೋರ್ಟ್ ಇಂಪಾರ್ಟೆಂಟ್ ಆಗಿರುತ್ತದೆ. 4 ಪ್ರಮುಖ ಪಾತ್ರಗಳ ಸುತ್ತ ಕಥೆ ನಡೆಯುತ್ತದೆ. ಕಥೆ ಮಾಡುವಾಗ ಫೋರೆನ್ಸಿಕ್ ತಜ್ಞರ ಸಲಹೆ ತೆಗೆದುಕೊಂಡೆ. ಬೆಂಗಳೂರು ಸುತ್ತಮುತ್ತ 30 ದಿನ ಚಿತ್ರೀಕರಿಸಲಾಗಿದ್ದು, ಈಗಾಗಲೇ ಸೆನ್ಸಾರ್ನಿಂದ ಯು/ಎ ಸರ್ಟಿಫಿಕೆಟ್ ಸಿಕ್ಕಿದೆ ಎಂದು ಹೇಳಿದರು.
ನಾಯಕಿ ರಚನಾ ಇಂದರ್ ಮಾತನಾಡಿ ಮೊದಲ ಬಾರಿಗೆ ಇಂಥ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹೆಚ್ಚು ಮಾತಿಲ್ಲ. ಮುಖದಲ್ಲೇ ಎಕ್ಷ್ಪ್ರೆಶನ್ಸ್ ತೋರಿಸಬೇಕಿತ್ತು ಎಂದರು. ಬೇರೊಬ್ಬರು ಮಾಡಬೇಕಿದ್ದ ಪಾತ್ರ ನನಗೆ ಬಂತು. ಇದು ಬರೀ ಮರ್ಡರ್ ಇನ್ವೆಸ್ಟಿಗೇಶನ್ ಸುತ್ತ ನಡೆವ ಕಥೆಯಲ್ಲ, ಸೈಕಲಾಜಿಕಲ್ ಚಿತ್ರವೂ ಹೌದು. ಶೂಟಿಂಗ್ ಅನುಭವ ತುಂಬಾ ಚೆನ್ನಾಗಿತ್ತು. ಸ್ಲಂನಲ್ಲೂ ಓಡಾಡಿದ್ದೇವೆ ಎಂದು ಭವಾನಿ ಪ್ರಕಾಶ್ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು.