ಮಂಗಳೂರು (ದಕ್ಷಿಣ ಕನ್ನಡ):ದೇವದಾಸ್ ಕಾಪಿಕಾಡ್ ತುಳು ಚಿತ್ರರಂಗದಲ್ಲಿ ಜನಪ್ರಿಯರು. ತುಳು ರಂಗಭೂಮಿಯಿಂದ ಪಯಣ ಆರಂಭಿಸಿದ ಇವರು ಒಂದು ದಶಕದಿಂದ ತುಳು ಸಿನಿಮಾರಂಗದಲ್ಲಿ ಜನಪ್ರಿಯರಾಗಿದ್ದಾರೆ. ನಟನಾಗಿ ಮಾತ್ರವಲ್ಲದೇ ಸಿನಿಮಾ ನಿರ್ದೇಶನದಲ್ಲೂ ಯಶಸ್ಸು ಕಂಡಿದ್ದಾರೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಮಾರ್ಚ್ 1ರಂದು ಕನ್ನಡ ಸಿನಿಮಾ 'ಪುರುಷೋತ್ತಮನ ಪ್ರಸಂಗ' ಬಿಡುಗಡೆಯಾಗಲಿದೆ. ತುಳು ಸಿನಿವಲಯದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕಾರ್ಯ ನಿರ್ವಹಿಸಿರುವ ಇವರ ಮೊದಲ ಕನ್ನಡ ಸಿನಿಮಾ ನೋಡುವ ಕಾತರದಲ್ಲಿ ಅಭಿಮಾನಿಗಳಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿರುವ ದೇವದಾಸ್ ಕಾಪಿಕಾಡ್, ಮೊದಲ ಬಾರಿಗೆ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದೇನೆ. ರಾಷ್ಟ್ರಕೂಟ ಸಂಸ್ಥೆಯವರು ನನಗೆ ಅವಕಾಶ ಮಾಡಿಕೊಟ್ಟರು. ಆರಂಭದಲ್ಲಿ ಸ್ವಲ್ಪ ಭಯವಾಗಿತ್ತು. ಆದರೂ ಧೈರ್ಯ ಮಾಡಿ ಈ ಸಿನಿಮಾ ಮಾಡಿದ್ದೇನೆ. ಟ್ರೇಲರ್ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಮುಂದೆ ಕನ್ನಡ ಸಿನಿಮಾಗಳನ್ನು ಮಾಡಬೇಕಾದರೆ ಈ ಸಿನಿಮಾಗೆ ಜನರ ಸಹಕಾರ ಬೇಕು. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದೇನೆ. 9 ತುಳು ಚಿತ್ರ ಮಾಡಿ ಯಶಸ್ಸು ಕಂಡಿದ್ದೇನೆ. ಆದರೆ, ತುಳು ವೀಕ್ಷಕರು ಮತ್ತು ಕನ್ನಡ ವೀಕ್ಷಕರು ಬೇರೆ. ಆ ವಿಚಾರವನ್ನು ಇಟ್ಟುಕೊಂಡು ಎಲ್ಲರಿಗೂ ಮೆಚ್ಚುಗೆಯಾಗುವಂತೆ ಕನ್ನಡ ಸಿನಿಮಾ ಮಾಡಲಾಗಿದೆ. ನಾಲ್ಕು ಹಾಡುಗಳಿವೆ. ತಾಂತ್ರಿಕವಾಗಿ ಯಾವುದೇ ಕೊರತೆ ಆಗಿಲ್ಲ ಎಂದು ಮಾಹಿತಿ ಹಂಚಿಕೊಂಡರು.
ನಿರ್ಮಾಪಕ ರವಿಕುಮಾರ್ ಅವರು ಈ ಸಿನಿಮಾ ಮೂಲಕ ತಮ್ಮ ಮಗನನ್ನು ನಾಯಕನಟನಾಗಿ ಪರಿಚಯಿಸುತ್ತಿದ್ದಾರೆ. ಕಿಸ್ ಸಿನಿಮಾ ಮೂಲಕ ಯಶಸ್ವಿ ನಿರ್ಮಾಪಕರಾಗಿದ್ದ ರವಿಕುಮಾರ್ ಅವರೀಗ ಎರಡನೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, "ನನಗೆ ಸಿನಿಮಾ ರಂಗಕ್ಕೆ ಬರಬೇಕು ಎಂದು ಚಿಕ್ಕಂದಿನಿಂದಲೂ ಆಶೆ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ನನ್ನ ಮಗನ ಮೂಲಕ ಕನಸು ಈಡೇರುತ್ತಿದೆ. ನನ್ನ 14 ವರ್ಷದ ಕನಸನ್ನು ದೇವದಾಸ್ ಕಾಪಿಕಾಡ್ ಅವರ ಮೂಲಕ ನನಸು ಮಾಡಿಕೊಂಡಿದ್ದೇನೆ. ಮಗ ಟೊರೆಂಟೋದಲ್ಲಿ ತರಬೇತಿ ಪಡೆದು ಬಂದಿದ್ದು, ಆತನಿಗೆ ಸಿನಿಮಾ ಅವಕಾಶ ಕೊಡಿಸಿದ್ದೇನೆ ಎಂದರು.