ಚಂದನವನದ ಅರಸು, ಅಭಿಮಾನಿಗಳ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರಂದ್ರೆ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರಿಗೂ ಅತ್ಯಂತ ಅಚ್ಚುಮೆಚ್ಚು. ಈ ಬೆಟ್ಟದ ಹೂವು ನಮ್ಮನೆಲ್ಲ ಅಗಲಿ ಅಕ್ಟೋಬರ್ಗೆ 29ಕ್ಕೆ 3 ವರ್ಷಗಳು. ನಟನೆ, ನಿರ್ಮಾಣ, ಗಾಯನ, ಸಮಾಜ ಸೇವೆ ಅಭಿಮಾನಿಗಳೆದೆಯಲ್ಲಿ ಅಚ್ಚಳಿಯದೇ ಉಳಿದಿದ್ದು, ಇಂದಿಗೂ ಅವರನ್ನು ನೆನೆದರೆ ಕಣ್ಣುಗಳು ಒದ್ದೆಯಾಗುತ್ತವೆ.
ಕೋವಿಡ್ ಸಂದರ್ಭ ಸಿನಿಮಾ ಕಟೌಟ್ ತಯಾಕರು, ಪ್ರೊಡಕ್ಷನ್ ಮ್ಯಾನೇಜರ್ ಸೇರಿದಂತೆ ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚಿ ಅವರ ದೃಷ್ಟಿಯಲ್ಲಿ ದೇವರಾಗಿದ್ದಾರೆ. ಮತ್ತೊಂದೆಡೆ, ಫಿಟ್ನೆಸ್ಗೆ ಆದ್ಯತೆ ಕೊಡುತ್ತಿದ್ದ ಕಾರಣ ಪುನೀತ್ ರಾಜ್ಕುಮಾರ್ ಇಬ್ಬರು ಜಿಮ್ ಟ್ರೇನರ್ಗಳನ್ನು ಹೊಂದಿದ್ದರು. ಪರ್ಸನಲ್ ಜಿಮ್ ಟ್ರೇನರ್ ಶುಭಕರ್ ಶೆಟ್ಟಿ ಮತ್ತು ಟ್ರೇನರ್ ಶೇಷಪ್ಪ. ಶುಭಕರ್ ಶೆಟ್ಟಿ ರಜೆಯಲ್ಲಿದ್ದಾಗ ಶೇಷಪ್ಪ ಅವರು ಪುನೀತ್ ಮನೆಗೆ ಬಂದು ವರ್ಕೌಟ್ ಬಗ್ಗೆ ಟ್ರೇನಿಂಗ್ ಕೊಡುತ್ತಿದ್ದರು. ಹಾಗಾಗಿ ಪವರ್ ಸ್ಟಾರ್ ಶೇಷಪ್ಪ ಅವರಿಗೆ ಲಕ್ಷ ರೂಪಾಯಿ ಬೆಲೆಬಾಳುವ ಉಡುಗೊರೆಯನ್ನು ಕೊಟ್ಟಿದ್ದರು. ಈ ಬಗ್ಗೆ ಈಟಿವಿ ಭಾರತದ ಸಿನಿಮಾ ಪ್ರತಿನಿಧಿ ಎಂ.ಕೆ ರವಿಕುಮಾರ್ ವಿಶೇಷ ಸಂದರ್ಶನ ಮಾಡಿದ್ದಾರೆ.
ಆ ಉಡುಗೊರೆಯೀಗ ಜಿಮ್ ಟ್ರೇನರ್ ಶೇಷಪ್ಪ ಅವರ ಜಿಮ್ನಲ್ಲಿ ಕೇಂದ್ರ ಬಿಂದುವಾಗಿದೆ. ಯಾರಿಗೂ ಗೊತ್ತಿಲ್ಲದ ಆ ಸ್ಪೆಷಲ್ ಗಿಫ್ಟ್ ಬಗ್ಗೆ ಶೇಷಪ್ಪ ಅವರು ಈಟಿವಿ ಭಾರತದೊಂದಿಗೆ ಎಕ್ಸ್ಕ್ಲ್ಯೂಸಿವ್ ಆಗಿ ಮಾಹಿತಿ ಹಂಚಿಕೊಂಡಿದ್ದಾರೆ. ಪವರ್ ಸ್ಟಾರ್ ಕೊಟ್ಟ ದುಬಾರಿ ಉಡುಗೊರೆಯನ್ನು ಈಟಿವಿ ಭಾರತದ ಕ್ಯಾಮರಾಗೆ ಪ್ರದರ್ಶಿಸಿದ್ದಾರೆ.
ಅಷ್ಟಕ್ಕೂ ಇದೇನು ಪ್ರತಿಮೆಯಂತೆ ಇದೆಯಲ್ಲ ಎಂದು ನಿಮಗನಿಸೋದು ಸಹಜ. ಇದು ಸ್ಟ್ಯಾಂಡಿಂಗ್ ಕಿಕ್ ಬಾಕ್ಸಿಂಗ್ ಸ್ಟ್ಯಾಚು. ಇದು ವರ್ಕೌಟ್ ಜೊತೆಗೆ ಕಿಕ್ ಬಾಕ್ಸಿಂಗ್ ಕಲಿಯಲು ಪೂರಕ. ಈ ಸ್ಟ್ಯಾಂಡಿಂಗ್ ಕಿಕ್ ಬಾಕ್ಸಿಂಗ್ ಸ್ಟ್ಯಾಚು ಈಗ ಶಿವರಾಜ್ಕುಮಾರ್ ಅವರಿಗೆ ಪರ್ಸನಲ್ ಟ್ರೇನರ್ ಆಗಿರುವ ಶೇಷಪ್ಪ ಅವರ ಹೆಬ್ಬಾಳದಲ್ಲಿರುವ ಜಿಮ್ನಲ್ಲಿದೆ.
50ನೇ ಹರೆಯದಲ್ಲಿ ಹ್ಯಾಟ್ರಿಕ್ ಹೀರೋ 'ಭಜರಂಗಿ' ಸಿನಿಮಾಗಾಗಿ ಬಾಡಿ ಬಿಲ್ಡ್ ಮಾಡಿ ಸಖತ್ ಸುದ್ದಿಯಾಗಿದ್ರು. ಅವರನ್ನು ಟ್ರೇನ್ ಮಾಡಿದ್ದು ಇದೇ ಶೇಷಪ್ಪ. ಪುನೀತ್ ಅವರ ಪರಿಚಯದ ಬಗ್ಗೆ ಸ್ವತಃ ಶೇಷಪ್ಪ ಹೇಳಿದಹಾಗೆ, ''ನಾನು ಭಜರಂಗಿ ಸಿನಿಮಾ ಸಮಯದಲ್ಲಿ ಶಿವಣ್ಣನಿಗೆ ಪರ್ಸನಲ್ ಟ್ರೇನಿಂಗ್ ಕೊಡುತ್ತಿದ್ದೆ. ಆಗ ಶುಭಕರ್ ಶೆಟ್ಟಿ, ಅಪ್ಪು ಸರ್ ಪರಿಚಯವಾಯಿತು. ಅಲ್ಲಿಂದ ಅಪ್ಪು ಸರ್ ಜೊತೆಗಿನ ಸ್ನೇಹ ಶುರುವಾಯಿತು. ನಾನು ಆಗಾಗ್ಗೆ ಸದಾಶಿವನಗರದಲ್ಲಿರುವ ಪುನೀತ್ ಸರ್ ನಿವಾಸಕ್ಕೆ ಹೋಗಿ ಕೆಲ ವರ್ಕೌಟ್ಗಳನ್ನು ಹೇಳಿಕೊಡುತ್ತಿದ್ದೆ. ಆ ಪ್ರೀತಿಗೆ ಅಪ್ಪು ಸರ್ ಬಹಳ ಇಷ್ಟು ಬೆಲೆಬಾಳುವ ಸ್ಟ್ಯಾಚುವನ್ನು ನನಗೆ ಉಡುಗೊರೆಯಾಗಿ ತಂದುಕೊಟ್ಟರು. ಅಮೆರಿಕನ್ ಡಾಲರ್ ಬೆಲೆ ಜೊತೆಗೆ ಇಂಡಿಯಾಗೆ ಇಂಪೋರ್ಟ್ ಆಗಲು 3 ರಿಂದ 4 ಲಕ್ಷದವರಗೆ ಖರ್ಚಾಗಿದೆ. ಇಷ್ಟು ದುಬಾರಿ ಉಡುಗೊರೆಯನ್ನು ಓರ್ವ ಸೂಪರ್ ಸ್ಟಾರ್ ಕೊಟ್ಟಿದ್ದಾರೆಂದ್ರೆ ಅವರು ಗೆಳೆತನಕ್ಕೆ ಎಷ್ಟು ಗೌರವ ಕೊಡುತ್ತಿದ್ದರು ಎಂಬುದನ್ನು ನೀವೇ ಊಹಿಸಿ'' ಎಂದರು.
ನಾನು ಈ ಸ್ಟ್ಯಾಂಡಿಂಗ್ ಕಿಕ್ ಬಾಕ್ಸಿಂಗ್ ಸ್ಟ್ಯಾಚುವನ್ನು ನನ್ನ ಜಿಮ್ನಲ್ಲಿ ಕಳೆದ 11 ವರ್ಷಗಳಿಂದ ಇಟ್ಟುಕೊಂಡಿದ್ದೇನೆ. ಪ್ರತಿದಿನ ನಾನು ಈ ಉಡುಗೊರೆಯನ್ನು ಸ್ವಚ್ಛಗೊಳಿಸಿ ನನ್ನ ಜಿಮ್ ಕೆಲಸಗಳನ್ನು ಶುರು ಮಾಡುತ್ತೇನೆ. ಈ ಸ್ಟ್ಯಾಂಡಿಂಗ್ ಕಿಕ್ ಬಾಕ್ಸಿಂಗ್ ಸ್ಟ್ಯಾಚುವನ್ನು ಪುನೀತ್ ಕೊಟ್ಟಿದ್ದಾರೆಂಬುದನ್ನು ತಿಳಿದು ಜಿಮ್ಗೆ ಬರುವವರು ಕಿಕ್ ಬಾಕ್ಸಿಂಗ್ ಮಾಡದೇ ಮನೆಗೆ ಹೋಗಲ್ಲ ಎಂದು ತಿಳಿಸಿದರು.