ಬಾಲಿವುಡ್ ಲವ್ ಬರ್ಡ್ಸ್ ಪುಲ್ಕಿತ್ ಸಾಮ್ರಾಟ್ ಹಾಗೂ ಕೃತಿ ಖರಬಂದ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಹಸೆಮಣೆ ಏರಲಿದ್ದು, ಸಿದ್ಧತೆ ನಡೆದಿದೆ. ವಿದ್ಯುತ್ ದೀಪಾಲಂಕಾರದಿಂದ ವರನ ಮನೆ ಶೃಂಗಾರಗೊಂಡಿದ್ದು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಧು-ವರನ ಕುಟುಂಬಗಳು ಮದುವೆ ತಯಾರಿಯಲ್ಲಿ ನಿರತರಾಗಿದ್ದು, ವಿಶೇಷ ಸಂದರ್ಭಕ್ಕಾಗಿ ಎದುರು ನೋಡುತ್ತಿದ್ದಾರೆ.
ಕೆಲ ಸಮಯದಿಂದ ಪ್ರೀತಿಯಲ್ಲಿರುವ ಈ ಜೋಡಿ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ಮದುವೆ ಎಂಬ ಮಹತ್ವದ ದಿನಕ್ಕಾಗಿ ಪ್ರಯಾಣ ಬೆಳೆಸಿದರು. ಎಂಗೇಜ್ಮೆಂಟ್ ಪ್ರೋಗ್ರಾಮ್ ಕೇವಲ ಕುಟುಂಬಸ್ಥರು, ಆತ್ಮೀಯರಿಗೆ ಸೀಮಿತವಾಗಿತ್ತು. ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ಪರಸ್ಪರ ಉಂಗುರ ತೊಡಿಸಿದ್ದರು. ನಾಳೆ ಹಸೆಮಣೆ ಏರಲಿದ್ದಾರೆ.
ಮೂಲಗಳ ಪ್ರಕಾರ, ಪುಲ್ಕಿತ್ ಮತ್ತು ಕೃತಿ ಹರಿಯಾಣದ ಮನೇಸರ್ನ ಐಟಿಸಿ ಗ್ರ್ಯಾಂಡ್ ಭಾರತ್ನಲ್ಲಿ ಮದುವೆ ಆಗಲಿದ್ದಾರೆ. ಪುಲ್ಕಿತ್ ಮತ್ತು ಕೃತಿ ಇಬ್ಬರೂ ತಮ್ಮ ಹುಟ್ಟೂರ ಬಳಿಯೇ ದಾಂಪತ್ಯ ಜೀವನ ಶುರು ಮಾಡಲು ಯೋಜಿಸಿದ್ದಾರೆ. ಸದ್ಯ ಜೋಡಿಯ ಮತ್ತು ಅವರ ಮನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.
ಜೋಡಿಯ ಸಿನಿಮಾ ವಿಚಾರ ಗಮನಿಸುವುದಾದರೆ, ನಟ ಪುಲ್ಕಿತ್ ಸಾಮ್ರಾಟ್ ಕೊನೆಯದಾಗಿ ಫುಕ್ರೆ 3ರಲ್ಲಿ ಕಾಣಿಸಿಕೊಂಡರು. ಪುಲ್ಕಿತ್ ಸೇರಿದಂತೆ, ವರುಣ್ ಶರ್ಮಾ, ಮಂಜೋತ್ ಸಿಂಗ್, ರಿಚಾ ಚಡ್ಡಾ ಮತ್ತು ಪಂಕಜ್ ತ್ರಿಪಾಠಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಕಳೆದ ವರ್ಷ ಮೇಡ್ ಇನ್ ಹೆವನ್‌ನ ಎರಡನೇ ಸೀಸನ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ, ಕೃತಿ 'ರಿಸ್ಕಿ ರೋಮಿಯೋ'ದಲ್ಲಿ ಸನ್ನಿ ಸಿಂಗ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಮೇ ತಿಂಗಳಲ್ಲಿ 'ರಿಸ್ಕಿ ರೋಮಿಯೋ' ಬಿಡುಗಡೆ ಆಗಲಿದೆ.