ದಕ್ಷಿಣ ಕನ್ನಡ ಜನರು ಅಪಾರ ನಂಬಿಕೆ ಇಟ್ಟಿರುವ ದೈವ ''ಕೊರಗಜ್ಜ''ನ ಮೇಲೆ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬರುತ್ತಿರೋದು ನಿಮಗೆ ತಿಳಿದಿರುವ ವಿಷಯ. ಈಗಾಗಲೇ ನಟರು ಹಾಗೂ ಚಿತ್ರದ ಶೀರ್ಷಿಕೆಯಿಂದ ಸದ್ದು ಮಾಡಿರುವ ಈ ಚಿತ್ರ ಬಿಡುಗಡೆಗೂ ಮುನ್ನ ಕೆಲ ವಿಚಾರಗಳಿಂದ ಗಮನ ಸೆಳೆಯುತ್ತಿದೆ. ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರಿಂದ ಭರ್ಜರಿ ಉಡುಗೊರೆ ಸಿಕ್ಕಿದೆ.
ಹೌದು, ಈಗಾಗಲೇ ಕೊರಗಜ್ಜ ಸಿನಿಮಾ ನೋಡಿರುವ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದ ಗುಣಮಟ್ಟ, ತಾಂತ್ರಿಕತೆಗೆ ಮನಸೋತು ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಟಾಪ್ ಎಂಡ್ ಕಿಯಾ ಕೇರನ್ಸ್ ಕಾರನ್ನು ಗಿಫ್ಟ್ ಮಾಡಿದ್ದಾರೆ. ಐಶಾರಾಮಿ ಕಾರು 20 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ.
ನಿರ್ದೇಶಕರ ಸೃಜನಶೀಲ ತಾಂತ್ರಿಕ ನೈಪುಣ್ಯತೆಯೊಂದಿಗೆ ಸುಮಾರು 15ಕೋಟಿ ಬಜೆಟ್ನ ಈ ಸಿನೆಮಾ ಯಾವ ಮಟ್ಟದಲ್ಲಿ ಮೂಡಿಬಂದಿರಬಹುದೆನ್ನುವುದಕ್ಕೆ ಇದು ಉದಾಹರಣೆ ಎಂದು ಖ್ಯಾತ ನಟಿ ಭವ್ಯ ಅವರು ಈ ಸಂದರ್ಭದಲ್ಲಿ ಹೇಳಿದರು. ನಾನು ಇಂತಹ ಸಿನಿಮಾದಲ್ಲಿ ಪಾರ್ಟ್ ಮಾಡಿದ್ದು ಇನ್ನಿಲ್ಲದ ಹೆಮ್ಮೆ ಮತ್ತು ಪುನೀತಭಾವ ಮೂಡಿಸಿದೆ ಎಂದು ಹೇಳಿದರು.
ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಮಾತನಾಡಿ, ನನ್ನ ತ್ರಿವಿಕ್ರಮ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಈ ಮಟ್ಟದಲ್ಲಿ ಸಿನಿಮಾ ಒಂದು ಮೂಡಿ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ. ಕೊರಗಜ್ಜ ಸಿನಿಮಾ ಎಲ್ಲಾ ಊಹೆಯನ್ನು ಮೀರಿ ಅದ್ಭುತ ರೀತಿಯಲ್ಲಿ ಮೂಡಿಬಂದಿದೆ. ಭಾರತೀಯ ಚಿತ್ರರಂಗದಲ್ಲೇ ಇದೊಂದು ವಿಶಿಷ್ಟ ಸಿನಿಮಾ ಆಗಲಿದೆ. ನಿರ್ದೇಶಕರು ಸುಮಾರು ಒಂದೂವರೆ ವರ್ಷಗಳ ಕಾಲ ರಿಸರ್ಚ್ ಮಾಡಿ 800 ವರ್ಷಗಳ ಹಿಂದೆ ಬದುಕಿದ್ದ 23-24 ವರ್ಷ ಪ್ರಾಯದ "ತನಿಯಾ" ಎನ್ನುವ ಆದಿವಾಸಿ ಹುಡುಗ, ಮಹಾನ್ ಶಕ್ತಿ "ಕೊರಗಜ್ಜ" ಆಗಿ ಬೆಳಗುತ್ತಿರುವ ಬಗೆ ಹೇಗೆ ಎನ್ನುವುದನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಸಿನಿಮಾ ಮಾಡಿದ್ದಾರೆ. ಈ ಮಹಾನ್ ಶಕ್ತಿಯನ್ನು ಮರುಸೃಷ್ಟಿ ಮಾಡಿ ಸಸ್ಪೆನ್ಸ್, ಉತ್ಸುಕತೆ, ಥ್ರಿಲ್ಲರ್, ಊಹಿಸಲಾರದ ತಿರುವುಗಳ ಕಥಾಹಂದರ ಮತ್ತು ಬಿಗಿದಿಟ್ಟುಕೊಳ್ಳುವ ಆಕರ್ಷಣೀಯ ಸ್ಕ್ರೀನ್ ಪ್ಲೇ ಸಿನಿಮಾವನ್ನು ಬೇರೆಯದ್ದೇ ಮಜಲಿಗೆ ಕೊಂಡೊಯ್ದಿದೆ ಎಂದರು.