ಚೆನ್ನೈ (ತಮಿಳುನಾಡು): ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರಿ, ಜನಪ್ರಿಯ ಹಿನ್ನೆಲೆ ಗಾಯಕಿ ಭವತಾರಿಣಿ ಗುರುವಾರ ಸಂಜೆ ನಿಧನರಾಗಿದ್ದಾರೆ. 47ರ ಹರೆಯದ ಖ್ಯಾತ ಹಿನ್ನೆಲೆ ಗಾಯಕಿಯು ಕಳೆದ ಕೆಲ ತಿಂಗಳುಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಆದ್ರೆ ದುರಾದೃಷ್ಟವಶಾತ್ ಜನವರಿ 25ರ ಸಂಜೆ ಕೊನೆಯುಸಿರೆಳೆದಿದ್ದಾರೆ.
ಯಕೃತ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಭವತಾರಿಣಿ ಅವರು ಶ್ರೀಲಂಕಾದಲ್ಲಿ ಆಯುರ್ವೇದಿಕ್ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಜ. 25ರ ಸಂಜೆ ಅವರು ವಿಧಿವಶರಾಗಿದ್ದಾರೆ. ಶ್ರೀಲಂಕಾದಿಂದ ಅವರ ಪಾರ್ಥಿವ ಶರೀರವನ್ನು ನಿನ್ನೆ (ಜ.26) ಸಂಜೆ ಚೆನ್ನೈಗೆ ತರಲಾಗಿದೆ. ಟಿ. ನಗರದಲ್ಲಿರುವ ಇಳಯರಾಜ ಅವರ ನಿವಾಸದಲ್ಲಿ ಇರಿಸಲಾಗಿದೆ. ಭವತಾರಿಣಿ ಪಾರ್ಥಿವ ಶರೀರಕ್ಕೆ ಹಲವು ರಾಜಕೀಯ ಗಣ್ಯರು, ಚಿತ್ರರಂಗದ ಖ್ಯಾತನಾಮರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಂದು ಗುಡಲೂರು ಸಮೀಪದ ಲೋವರ್ ಕ್ಯಾಂಪ್‌ನಲ್ಲಿರುವ ಇಳಯರಾಜ ಅವರ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಪಾರ್ಥಿವ ಶರೀರವು ಚೆನ್ನೈನಿಂದ ಆಂಬ್ಯುಲೆನ್ಸ್ ಮೂಲಕ ಥೇಣಿ ಜಿಲ್ಲೆಯ ಲೋವರ್ ಕ್ಯಾಂಪ್‌ನಲ್ಲಿರುವ ಇಳಯರಾಜ ತೋಟದ ಮನೆ ತಲುಪುವ ನಿರೀಕ್ಷೆಯಿದೆ. ಇಳಯರಾಜ ಅವರು ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಫಾರ್ಮ್‌ಹೌಸ್‌ಗೆ ತೆರಳಿದ್ದಾರೆ.