ಬೆಂಗಳೂರು: ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಟ ದರ್ಶನ್ ಹಾಗೂ ಇತರ ಆರೋಪಿಗಳನ್ನು ಇಂದು ಮೈಸೂರಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲು ಪೊಲೀಸರು ಸಿದ್ಧತೆ ಆರಂಭಿಸಿದ್ದಾರೆ.
ರೇಣುಕಾಸ್ವಾಮಿಯ ಹತ್ಯೆ ಬಳಿಕ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲು ಮೈಸೂರಿಗೆ ತೆರಳಿದ್ದ ದರ್ಶನ್ ಖಾಸಗಿ ಹೋಟೆಲ್ನಲ್ಲಿ ತಂಗಿದ್ದರು. ಪ್ರಕರಣದಲ್ಲಿ ಪೊಲೀಸರೆದುರು ಶರಣಾಗಲು ಹಿಂದೇಟು ಹಾಕಿದ್ದ ದರ್ಶನ್, ಪೊಲೀಸರನ್ನು ಮೈಸೂರಿಗೆ ಕರೆಸಿ ಅವರ ಮನವೊಲಿಸುವ ಪ್ರಯತ್ನವನ್ನು ಮಾಡಿದ್ದರು ಎನ್ನಲಾಗಿದೆ. ಆದ್ದರಿಂದ, ಪ್ರಕರಣದಲ್ಲಿ ಮೈಸೂರಿನಲ್ಲಿಯೂ ಮಹಜರು ಪ್ರಕ್ರಿಯೆ ಅಗತ್ಯ ಎಂದು ಅಭಿಪ್ರಾಯಪಟ್ಟಿರುವ ಪೊಲೀಸರು, ಇಂದು ನಟ ದರ್ಶನ್ ಹಾಗೂ ಶರಣಾಗಿದ್ದ ಕೆಲ ಆರೋಪಿಗಳನ್ನು ಮೈಸೂರಿಗೆ ಕರೆದೊಯ್ದು ಮಹಜರು ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.