'ಖಾಲಿ ಡಬ್ಬ'. ಹೀಗೊಂದು ವಿಭಿನ್ನ ಶೀರ್ಷಿಕೆಯ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮೂಡಿಬರುತ್ತಿದೆ. ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಪ್ರಕಾಶ್ ಕೆ ಅಂಬ್ಳೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಪ್ರಕಾಶ್ ಅವರ ಮೊದಲ ಕನಸಿಗೆ ಮಂಜು ಗುರಪ್ಪ ಹಣ ಹಾಕಿದ್ದು, ರಾಮ್ ಗುಡಿ ನಾಯಕನಾಗಿ ನಟಿಸಿದ್ದಾರೆ. ಆದ್ಯಾ ಪ್ರಿಯಾ, ಹರಿತಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಪ್ರಕಾಶ್ ಕೆ ಅಂಬ್ಳೆ, ಈ ಸಿನಿಮಾದಲ್ಲಿ ಖಾಲಿ ಡಬ್ಬ ಕೂಡ ಒಂದು ಪಾತ್ರ. ವಯಸ್ಸು, ಸಮಯ ಮೀರಿದ ಪ್ರತಿಯೊಬ್ಬರ ಲೈಫು ಖಾಲಿ. ಹೀಗಾಗಿ ಚಿತ್ರಕ್ಕೆ ಖಾಲಿ ಡಬ್ಬ ಎಂದು ಹೆಸರು ಇಡಲಾಗಿದೆ. ಈ ಹಿಂದೆ 10 ಸಿನಿಮಾಗಳಲ್ಲಿ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ಈ ಅನುಭವದಿಂದ ಇದೀಗ ನಿರ್ದೇಶನಕ್ಕಿಳಿದಿದ್ದೇನೆ. ಚಿತ್ರಕಥೆ, ಸಂಭಾಷಣೆ ಬರೆದು ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ. ಚಿತ್ರದ ಐದು ಹಾಡುಗಳಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದು, ಸಂಗೀತ ನಿರ್ದೇಶನ ಮಾಡಿದ್ದಾರೆ. ಇಡೀ ತಂಡಕ್ಕೆ ನಾಗೇಂದ್ರ ಪ್ರಸಾದ್ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ತಿಳಿಸಿದರು.
ನಟ ರಾಮ್ ಗುಡಿ ಮಾತನಾಡಿ, ಖಾಲಿ ಡಬ್ಬ ಟೈಟಲ್ ಇಟ್ಟಾಗ್ಲೇ ನೆಗೆಟಿವ್ ಟಾಕ್ ಆಗಿತ್ತು. ಕೆಲವರು ಚೆನ್ನಾಗಿದೆ ಎಂದರು. ಮೂಲ ಕಥೆಗಾರರು 'ಜೀವನವೊಂದು ಖಾಲಿ ಡಬ್ಬ' ಅಂತಾ ಟೈಟಲ್ ಇಡಿ ಎಂದರು. ಇದು ಕೇವಲ ಸಿನಿಮಾವಲ್ಲ. ತೇರು ಇದ್ದಂಗೆ. ಎಲ್ಲರೂ ಕೈ ಜೋಡಿಸಿದರು. ಸರಿಯಾದ ಸಮಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಮಾತ್ರ ಜೀವನವೆಂಬ ಡಬ್ಬ ತುಂಬುತ್ತದೆ. ಇಲ್ಲ ಎಂದರೆ ಜೀವನವೇ ಖಾಲಿ ಡಬ್ಬವಾಗುತ್ತದೆ ಎಂದರು.