ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ಮೂಲಕ ಖ್ಯಾತರಾದ ನಟ ಗುರುಚರಣ್ ಸಿಂಗ್ ಕಳೆದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದು, ಪ್ರಕರಣ ದಾಖಲಾಗಿದೆ. ಈ ನಾಪತ್ತೆ ಪ್ರಕರಣದ ತನಿಖೆ ಮುಂದುವರಿದಿದೆ. ಆದ್ರೀಗ ಅವರು ಪ್ಲ್ಯಾನ್ ಮಾಡಿ ಕಣ್ಣರೆ ಆಗಿದ್ದಾರೆಂದು ಶಂಕಿಸಲಾಗಿದೆ. ವರದಿ ಪ್ರಕಾರ, ಗುರುಚರಣ್ ಸಿಂಗ್ ತಮ್ಮ ಫೋನ್ ಅನ್ನು ದೆಹಲಿಯ ಪಾಲಂ ಪ್ರದೇಶದಲ್ಲಿ ಬಿಟ್ಟು ಬಳಿಕ ನಗರದಿಂದ ಹೊರಗೆ ತೆರಳಿದ್ದಾರೆ.
ವರದಿ ಪ್ರಕಾರ, ನಟ ತಮ್ಮ ಫೋನ್ ಅನ್ನು ಪಾಲಂ ಪ್ರದೇಶದಲ್ಲಿ ಬೀಳಿಸಿದ್ದಾರೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. "ನಾವು ಗುರುಚರಣ್ ಸಿಂಗ್ ಅವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಆದರೆ ಪ್ರಕರಣ ಸಂಕೀರ್ಣಗೊಂಡಿದೆ. ನಮ್ಮ ಪ್ರಯತ್ನಗಳಿಗೆ ಸವಾಲೆಸೆದಿದೆ. ಏಕೆಂದರೆ ಫೋನ್ ನಟನ ಬಳಿ ಇಲ್ಲ. ಅವರು ಒಂದು ಇ-ರಿಕ್ಷಾದಿಂದ ಮತ್ತೊಂದಕ್ಕೆ ಹೋಗಿರುವ ಸಿಸಿಟಿವಿ ಸಾಕ್ಷಿಗಳಿವೆ. ಅವರು ಎಲ್ಲವನ್ನೂ ಮೊದಲೇ ಪ್ಲ್ಯಾನ್ ಮಾಡಿ ದೆಹಲಿ ತೊರೆದಂತೆ ತೋರುತ್ತಿದೆ'' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಪ್ರಿಲ್ 22ರಂದು ಗುರುಚರಣ್ ಸಿಂಗ್ ನಾಪತ್ತೆಯಾಗಿದ್ದಾರೆ. ರಾತ್ರಿ 8.30ರ ಸುಮಾರಿಗೆ ಅವರ ತಂದೆ, ಮಗನ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ನಟ ಮುಂಬೈ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ, ಅವರು ಮುಂಬೈ ತಲುಪಲಿಲ್ಲ. ಮನೆಗೂ ವಾಪಸ್ ಆಗಲಿಲ್ಲ. ಫೋನ್ ಸಂಪರ್ಕಕ್ಕೆ ಸಿಗಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. "ಅವರು ಮಾನಸಿಕವಾಗಿ ಸ್ಥಿರವಾಗಿದ್ದಾರೆ. ಅವರನ್ನು ಹುಡುಕಿದ್ದೇವೆ. ಅವರು ಕಾಣೆಯಾಗಿದ್ದಾರೆ" ಎಂದು ಗುರುಚರಣ್ ಸಿಂಗ್ ಅವರ ತಂದೆ ಪೊಲೀಸರಲ್ಲಿ ತಿಳಿಸಿದ್ದರು. ಅಂದು ತನಿಖೆ ಚುರುಕುಗೊಂಡಿದೆ ಎಂದು ಪೊಲೀಸರು ತಿಳಿಸಿದ್ದರು.