ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರಗಳುಳ್ಳ ಚಿತ್ರಗಳನ್ನು ನಿರ್ದೇಶಿಸಿ, ನಟಿಸುವ ಜತೆಗೆ ನಿರ್ಮಾಣದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಂಡಿರುವ ಜನಪ್ರಿಯ ನಟ ರಿಷಬ್ ಶೆಟ್ಟಿ. ಇವರು ರಿಷಬ್ ಶೆಟ್ಟಿ ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಹೊಸ ಚಿತ್ರ 'ಲಾಫಿಂಗ್ ಬುದ್ಧ'. ಸದ್ಯ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಪೊಲೀಸ್ ಧ್ವಜ ದಿನದ ಪ್ರಯುಕ್ತ ಕರ್ನಾಟಕ ಪೊಲೀಸ್ ಇಲಾಖೆಗೆ ಶುಭಾಶಯ ಕೋರಿದೆ.
ರಿಷಬ್ ಶೆಟ್ಟಿ ಪೋಸ್ಟ್: ಈ ಚಿತ್ರ ನಿರ್ಮಿಸುತ್ತಿರುವ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಕೂಡ ಈ ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. 'ನಮ್ಮ ಧೀರ ಪೊಲೀಸರ ನಿಸ್ವಾರ್ಥ ಸೇವೆ, ಧೈರ್ಯ, ಶೌರ್ಯ ಹಾಗೂ ಕರ್ತವ್ಯ ನಿಷ್ಠೆಯನ್ನು ಗೌರವಿಸುವ ಸುದಿನ. 'ಪೊಲೀಸ್ ಧ್ವಜ ದಿನಾಚರಣೆ'ಯ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.
ಲಾಫಿಂಗ್ ಬುದ್ಧ ಸಿನಿಮಾ ಪೊಲೀಸ್ ಕಾನ್‌ಸ್ಟೇಬಲ್ ಸುತ್ತ ಸುತ್ತುತ್ತದೆ. ದೇಹದ ತೂಕ ಹೆಚ್ಚಿರುವ ಕಾನ್‌ಸ್ಟೇಬಲ್ ಹೇಗೆ ಜನರ ಉತ್ಸಾಹವನ್ನು ಹೆಚ್ಚಿಸುತ್ತಾರೆ ಮತ್ತು ಇಡೀ ಪೊಲೀಸ್ ಠಾಣೆಗೆ ಸಂತೋಷವನ್ನು ಹೇಗೆ ತರುತ್ತಾರೆ ಎಂಬುದೇ ಚಿತ್ರದ ಕಥೆ. ಹಾಸ್ಯದೊಂದಿಗೆ ಭಾವನಾತ್ಮಕ ದೃಶ್ಯಗಳೂ ಸಹ ಸಿನಿಮಾದಲ್ಲಿರಲಿವೆ ಎಂದಿದೆ ಚಿತ್ರತಂಡ.