ತೆಲಂಗಾಣದಲ್ಲಿ ಸಿನಿಮಾಗಳು, ಚಿತ್ರಮಂದಿರಗಳು ಅನಿರೀಕ್ಷಿತ ಅಡೆತಡೆಗಳನ್ನು ಎದುರಿಸುತ್ತಿವೆ. ಇದು ಥಿಯೇಟರ್ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತಹ ಕ್ರಮ ಕೈಗೊಳ್ಳಲು ಕಾರಣವಾಗಿದೆ. ಹಣಕಾಸಿನ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ, ತೆಲಂಗಾಣದಾದ್ಯಂತ 400ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಸಿನಿಮಾ ಹಾಲ್‌ಗಳನ್ನು ಈ ಶುಕ್ರವಾರದಿಂದ (ಮೇ 17) ಮೇ 26ರ ವರೆಗೆ ಅಂದರೆ 10 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಟಾಲಿವುಡ್‌ನ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳು ಇಳಿಮುಖವಾಗುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಬೇಸಿಗೆಯಲ್ಲಿ ಬಹುನಿರೀಕ್ಷಿತ, ಸೂಪರ್ ಸ್ಟಾರ್ ಕಾಸ್ಟ್ ಸಿನಿಮಾಗಳು ಬಿಡುಗಡೆ ಆಗದಿರುವ ಹಿನ್ನೆಲೆ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆ ಇಳಿಕೆ ಕಂಡಿದೆ. ಸಾಮಾನ್ಯವಾಗಿ ಈ ಋತುವಿನಲ್ಲಿ ದೊಡ್ಡ ಜನಸಂಖ್ಯೆಯನ್ನು ಸೆಳೆಯುವ ಬ್ಲಾಕ್ ಬಸ್ಟರ್ ಸಿನಿಮಾಗಳು ಬಿಡುಗಡೆ ಆಗುತ್ತವೆ. ಆದರೆ ಪ್ರಸ್ತುತ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆ ಆಗದಿರುವ ಹಿನ್ನೆಲೆ, ಚಿತ್ರಮಂದಿರಗಳ ವ್ಯವಹಾರದ ಮೇಲೆ ದೊಡ್ಡ ಹೊಡೆತ ಬಿದ್ದಿದೆ.
ಪ್ರಸ್ತುತ ಎಲ್ಲೆಡೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಕ್ರೇಜ್ ಜೋರಾಗಿದೆ. ಜೊತೆಗೆ ಚುನಾವಣೆಗಳು ಕೂಡ ನಡೆಯುತ್ತಿವೆ. ಅಲ್ಲದೇ ಬೇಸಿಗೆಯ ಬಿಸಿ ಹೊಡೆತ ಬೇರೆ. ಮೊದಲು ತಿಳಿಸಿದ ಎರಡು ಅಂಶಗಳು ಸಾರ್ವಜನಿಕರ ಗಮನವನ್ನು ಬೆಳ್ಳಿ ಪರದೆಯಿಂದ ಬೇರೆಡೆಗೆ ತಿರುಗಿಸಿವೆ. ಹಾಗಾಗಿ ಚಿತ್ರಮಂದಿರಗಳತ್ತ ಬರುವ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಿದೆ.
ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ತಮ್ಮ ಕಾರ್ಯಾಚರಣೆಯನ್ನು ಉಳಿಸಿಕೊಳ್ಳಲು ಬ್ಲಾಕ್ ಬಸ್ಟರ್ ಸಿನಿಮಾ ಸೀಸನ್ ಮೇಲೆ ಹೆಚ್ಚು ಅವಲಂಬಿತವಾಗಿವೆ. ಆದ್ರೆ ಈ ಕುಸಿತ ಚಿತ್ರಮಂದಿರಗಳ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ. ಮಲ್ಟಿಪ್ಲೆಕ್ಸ್‌ಗಳಿಗಿಂತ ಭಿನ್ನವಾಗಿ, ಈ ಸಿನಿಮಾ ಹಾಲ್‌ಗಳು ಸೀಮಿತ ಆದಾಯದ ಸ್ಟ್ರೀಮ್ ವ್ಯವಸ್ಥೆ ಹೊಂದಿದ್ದು, ಚಲನಚಿತ್ರ ವೇಳಾಪಟ್ಟಿ ಮತ್ತು ಪ್ರೇಕ್ಷಕರ ಸಂಖ್ಯೆಯಲ್ಲಿನ ಏರಿಳಿತಗಳಿಗೆ ಹೆಚ್ಚು ಹೊಣೆಗಾರರಾಗುತ್ತವೆ. ಕಳೆದೆರಡು ತಿಂಗಳುಗಳಲ್ಲಿ ಸಣ್ಣ ಮತ್ತು ಮಧ್ಯಮ-ಬಜೆಟ್ನ ಸಿನಿಮಾಗಳು ಪ್ರೇಕ್ಷಕರ ಮೇಲೆ ಪ್ರಭಾವ ಬೀರಲು ವಿಫಲವಾಗಿದ್ದು, ವ್ಯವಹಾರವನ್ನು ಮತ್ತಷ್ಟು ದುರ್ಬಲಗೊಳಿಸಿವೆ.