ಲಾಸ್ ಏಂಜಲೀಸ್ (ಅಮೆರಿಕ):ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ 96ನೇ 'ಆಸ್ಕರ್' (Oscars 2024) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಅಂತರರಾಷ್ಟ್ರೀಯ ಪ್ರಶಸ್ತಿ ಸಮಾರಂಭವು ಅನೇಕ ಕಾರಣಗಳಿಂದ ಸದ್ದು ಮಾಡುತ್ತಿದೆ. ಹಲವು ಬಾರಿ ಆಸ್ಕರ್ ವೇದಿಕೆಯಲ್ಲಿ ವಿಚಿತ್ರ ಸಂಗತಿಗಳು ನಡೆದಿವೆ. ಇಂದು (ಸೋಮವಾರ) ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಡಬ್ಲ್ಯೂಡಬ್ಲ್ಯೂಇ ಪಟು ಮತ್ತು ಹಾಲಿವುಡ್ ನಟ ಜಾನ್ ಸೀನಾ ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್ ಪ್ರಶಸ್ತಿಯನ್ನು ನೀಡಲು ವೇದಿಕೆಯ ಮೇಲೆ ಬೆತ್ತಲೆಯಾಗಿಯೇ ಕಾಣಿಸಿಕೊಂಡಿದ್ದಾರೆ. ವೇದಿಕೆ ಮುಂಭಾಗದಲ್ಲಿದ್ದವರು ಇದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ.
ಜಾನ್ ಸೀನಾ ಬಟ್ಟೆಯಿಲ್ಲದೆ ವೇದಿಕೆಯನ್ನು ತಲುಪಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಜಿಮ್ಮಿ ಕಿಮ್ಮೆಲ್ ಅವರು, ಜಾನ್ ಸೀನಾ ಅವರನ್ನು ಅತ್ಯುತ್ತಮ ವೇಷಭೂಷಣ ವಿಭಾಗದಲ್ಲಿ ಪ್ರಶಸ್ತಿಯನ್ನು ನೀಡಲು ಆಹ್ವಾನಿಸಿದರು. ಜಾನ್ ಸೀನಾ ಬಟ್ಟೆ ಇಲ್ಲದೆ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸುಳಿವು ನೀಡಿದರು. ಆದ್ರೆ, ಆರಂಭದಲ್ಲಿ ಸೀನಾ ಬಟ್ಟೆಯಿಲ್ಲದೆ ಹೊರಗೆ ಹೋಗಲು ಹಿಂಜರಿದರು. ಆಸ್ಕರ್ 2024ರ ನಿರೂಪಕ ಕಿಮ್ಮೆಲ್ ಅವರ ಮನವೊಲಿಸಿದ ನಂತರ, ಜಾನ್ ಸೀನಾ ಬೆತ್ತಲಾಗಿಯೇ ವೇದಿಕೆಯನ್ನು ತಲುಪಿದರು.
ನಗ್ನವಾಗಿ ವೇದಿಕೆ ಬಂದ ಜಾನ್ ಸೀನಾ ನೋಡಿ ನಕ್ಕ ಜನ:ಬಟ್ಟೆಯಿಲ್ಲದೆ ವೇದಿಕೆಯ ಮೇಲೆ ಬಂದು ನಿಂತ ಜಾನ್ ಸೀನಾ ಅವರನ್ನು ನೋಡಿ ನೆರೆದಿದ್ದವರು ನಗತೊಡಗಿದರು. ಇದರ ನಂತರ, ಸೀನಾ ಸ್ವಲ್ಪ ಹಿಂಜರಿಕೆಯನ್ನು ಎದುರಿಸಿದರು. ತಮಗೆ ಅಡ್ಡಲಾಗಿ ಪ್ರಶಸ್ತಿಯ ಲಕೋಟೆಯನ್ನು ಹಿಡಿದುಕೊಂಡಿದ್ದರು. "ಉಡುಪುಗಳು ಬಹಳ ಮುಖ್ಯ. ಬಹುಶಃ ಇಲ್ಲಿ ಪ್ರಮುಖ ವಿಷಯವಾಗಿದೆ" ಎಂದು ಜಾನ್ ಸೀನಾ ಹೇಳಿದಕ್ಕೆ ಎಲ್ಲ ನಗೆಗಡಲಲ್ಲಿ ತೇಲಿದರು. ಬಳಿಕ ಅತ್ಯುತ್ತಮ ವೇಷಭೂಷಣದಿಂದ ಕೂಡಿದ್ದ ಉಡುಗೆಯನ್ನು ಜಾನ್ ಸೀನಾಗೆ ತೊಡಿಸಲಾಯಿತು. ನಂತರ ವಿಜೇತರ ಹೆಸರನ್ನು ಸೀನಾ ಘೋಷಿಸಿದರು. ಜಾನ್ ಸೀನಾ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ.