ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆ ಒಳ್ಳೊಳ್ಳೆ ಕಂಟೆಂಟ್ ಸಿನಿಮಾಗಳೂ ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಈ ಸಾಲಿಗೀಗ 'ತಾಯವ್ವ' ಹೊಸ ಸೇರ್ಪಡೆ. ಸೂಲಗಿತ್ತಿ ಸುತ್ತ ಸಾಗುವ ಕಥೆಯ 'ತಾಯವ್ವ'ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್ ಕೊಟ್ಟರು. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಆರ್.ಅಶೋಕ್ ಮಾತನಾಡಿ, ತಾಯವ್ವ ಮನಸ್ಸಿಗೆ ಮುಟ್ಟುವ ಪದ. ತಾಯಿ ಅನ್ನೋ ಪದವೇ ಹಾಗೆ. ವಿಶೇಷವಾಗಿ ಹೆಣ್ಣು ಮಕ್ಕಳ ಬಗ್ಗೆ ತಯಾರಾಗಿರುವ ಸಿನಿಮಾ ಇದು. ಮಕ್ಕಳನ್ನು ಹೊರಲು ತಾಯಿ ಬೇಕು. ಹೆಂಡ್ತಿಯಾಗಿ ನಮ್ಮೆಲ್ಲಾ ಕಷ್ಟ ಸುಖಗಳಲ್ಲಿ ನಿಲ್ಲಲು ಹೆಣ್ಣು ಬೇಕು. ಆದರೆ ಮಗಳಾಗಿ ಬೇಡ ಅನ್ನುವುದು ಬಂದಿದೆ. ನಾನು ಮಂಡ್ಯದ ಸಾಕಷ್ಟು ಕಡೆಗಳಿಗೆ ಹೋಗಿದ್ದೇನೆ. ಅಲ್ಲೊಂದು ಆಲೆಮನೆಯಲ್ಲಿ ಲ್ಯಾಪ್ ಟಾಪ್ ಇಟ್ಟುಕೊಂಡು, ಅಲ್ಲೇ ಪರೀಕ್ಷೆ ಮಾಡಿ ಹೆಣ್ಣು ಅಂತಾ ಗೊತ್ತಾದಾಗ ಅಲ್ಲೇ ಅಬಾರ್ಷನ್ ಮಾಡುತ್ತಿದ್ದುದನ್ನು ಕೇಳಿದ್ದೇವೆ. ಕದ್ದು ಮುಚ್ಚಿ ಹೆಣ್ಣು ಮಗುವನ್ನು ಕೊಲೆ ಮಾಡುವಂಥದ್ದು ನಡೆಯುತ್ತಿದೆ. ಇಂಥ ಘಟನೆ ಕೇವಲ ಒಂದಲ್ಲ, ಲಕ್ಷಾಂತರ ನಡೆದಿದೆ. ಆದ್ರೀಗ ದಿನ ಕಳೆದಂತೆ ಜನರಲ್ಲಿ ಜಾಗೃತಿ ಮೂಡಿದೆ. ಗಂಡು, ಹೆಣ್ಣು ಎರಡನ್ನೂ ಸ್ವೀಕರಿಸುವ ಮನಸ್ಸು ಬಂದಿದೆ. ಹೆಣ್ಣಿನ ವಿಚಾರ ಬಂದಾಗ ತಾಯಿಯ ಭಾವನೆ ಪ್ರಮುಖವಾಗುತ್ತದೆ. ಈ ದೃಷ್ಟಿಯಿಂದ ತಾಯವ್ವ ಸಿನಿಮಾ ಮೂಡಿಬಂದಿದೆ. ಟೈಟಲ್ ಬಿಡುಗಡೆ ಮಾಡಲಾಗಿದೆ. ಜನರನ್ನು ಮುಟ್ಟುವಂತಹ ಸಿನಿಮಾವಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
'ತಾಯವ್ವ' ಚಿತ್ರತಂಡ (Photo: ETV Bharat) ಇದನ್ನೂ ಓದಿ:ಕರ್ನಾಟಕದಲ್ಲಿ ಅವಧಿಗೂ ಮುನ್ನ 'ಪುಷ್ಪ 2' ಪ್ರದರ್ಶನ: ಕ್ರಮಕ್ಕೆ ನಿರ್ಮಾಪಕರ ಸಂಘದಿಂದ ಆಗ್ರಹ
ನಂತರ ಹಿರಿಯ ನಟಿ ಉಮಾಶ್ರೀ ಮಾತನಾಡಿ, ಸುದೀಪ್ ಮೊದಲ ಸಿನಿಮಾ ತಾಯವ್ವ ಅನ್ನೋ ಟೈಟಲ್ ಮೇಲೆಯೇ ಆಗಿತ್ತು. ನಾನು ಆ ಚಿತ್ರದಲ್ಲಿ ಅಜ್ಜಿ ಅಥವಾ ತಾಯಿ ಪಾತ್ರ ಮಾಡಿದ್ದೆ. ಅದೇ ಟೈಟಲ್ ಈಗ ಕನ್ನಡ ಚಿತ್ರರಂಗದಲ್ಲಿ ರೀಪೀಟ್ ಆಗ್ತಿದೆ. ಭಾ.ಮಾ.ಹರೀಶ್ ಬಹಳ ಒಳ್ಳೆ ಪ್ರಯತ್ನ ಮಾಡಿದ್ದಾರೆ. ಮಕ್ಕಳು, ಮಹಿಳೆಯರಿಗಾಗಿ ಮಾಡುತ್ತಿರುವ ಪ್ರಯತ್ನ. ವಿಧಾನಸಭೆಯಲ್ಲಿ ಹೆಣ್ಣು ಭ್ರೂಣ ಹತ್ಯೆ, ಸಮಾಜದಲ್ಲಿರುವ ಮನಸ್ಥಿತಿ ಬಗ್ಗೆ ಮಾತನಾಡುತ್ತೇವೆ. ಅದೇ ರೀತಿ ಸಮಾಜಕ್ಕೆ ಅರಿವು ಮೂಡಿಸುವಂತಹ ಇಂತಹ ಸಿನಿಮಾಗಳು ಬಹಳ ಮುಖ್ಯವಾಗುತ್ತವೆ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಈ ರೀತಿಯ ಸಿನಿಮಾಗಳನ್ನು ಕಮರ್ಷಿಯಲ್ ವಿಧಾನದಲ್ಲಿ ಮಾಡುವುದು ಕಷ್ಟ ಎಂದು ಅನಿಸುತ್ತದೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.
ಇದನ್ನೂ ಓದಿ:'ಹೆಣ್ಣುಮಕ್ಕಳ ಹಿಂದೆ ಬಿದ್ದಿರೋ ....': ಬೆಂಕಿ ಹೊತ್ತಿಸಿದ ತ್ರಿವಿಕ್ರಮ್, ಚೈತ್ರಾ; 'ಇಲ್ಲಿರಲ್ಲ' ಎಂದ ಶಿಶಿರ್
ತಾಯವ್ವ ಸಿನಿಮಾವನ್ನು ನಂದಿ ಪ್ರಶಸ್ತಿ ಸಂಸ್ಥಾಪಕಿ ಎಸ್.ಪದ್ಮಾವತಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಚೊಚ್ಚಲ ಪ್ರಯತ್ನದಲ್ಲಿಯೇ ಕಂಟೆಂಟ್ ಸಿನಿಮಾ ಮಾಡಿದ್ದಾರೆ. ಸಾತ್ವಿಕ್ ಪವನ್ ಕುಮಾರ್ ನಿರ್ದೇಶನದ ಜೊತೆಗೆ ಛಾಯಾಗ್ರಹಣ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಪಿ.ಶೇಷಗಿರಿ ಕಥೆ ಚಿತ್ರಕಥೆ ಸಂಭಾಷಣೆ ಬರೆದಿರುವ ತಾಯವ್ವಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ತಾಯವ್ವ ಚಿತ್ರದ ಮೂಲಕ ಗೀತಪ್ರಿಯ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ಬಂಡೇ ಮಹಾಕಾಳಿ ದೇಗುಲದ ಲತಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ, ಬಹುತೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ನಿರ್ಮಾಪಕ ಭಾ.ಮಾ.ಹರೀಶ್ ಈ ಚಿತ್ರವನ್ನು ಅರ್ಪಿಸುತ್ತಿದ್ದು, ಶೂಟಿಂಗ್ ಮುಗಿಸಿರುವ ಸಿನಿಮಾ ಸೆನ್ಸಾರ್ಗೆ ಸಜ್ಜಾಗಿದೆ.