ಸ್ಯಾಂಡಲ್ವುಡ್ ಅಂಗಳಕ್ಕೆ ಯುವ ನಟ ನಟಿ, ನಿರ್ದೇಶಕರ ಆಗಮನ ಮುಂದುವರಿದಿದೆ. ನೂತನ ನಾಯಕ ನಟರ ಪಟ್ಟಿಗೀಗ ಭಾರ್ಗವ್ ಕೃಷ್ಣ ಎಂಬವರು ಸೇರ್ಪಡೆಯಾಗುತ್ತಿದ್ದಾರೆ. 'ಓಂ ಶಿವಂ' ಶೀರ್ಷಿಕೆಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಈ ಹಿಂದೆ 'ರಾಜ್ ಬಹದ್ದೂರ್' ಸಿನಿಮಾ ನಿರ್ದೇಶಿಸಿದ್ದ ಆಲ್ವಿನ್, ಯುವ ನಟ ಭಾರ್ಗವ್ ಕೃಷ್ಣ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. 'ಓಂ ಶಿವಂ' ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಲಿರಿಕಲ್ ಸಾಂಗ್‌ವೊಂದನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು. ಭಾರ್ಗವ್ ಕೃಷ್ಣ ಅವರ ಅಜ್ಜ ಅಜ್ಜಿ ಈ ಹಾಡನ್ನು ಬಿಡುಗಡೆ ಮಾಡಿ ಮೊಮ್ಮಗನ ಚೊಚ್ಚಲ ಚಿತ್ರಕ್ಕೆ ಶುಭ ಹಾರೈಸಿದರು. ಬಳಿಕ ಚಿತ್ರತಂಡದವರು ತಮ್ಮ ಚಿತ್ರದ ಅನುಭವ ಹಂಚಿಕೊಂಡರು.
ನಿರ್ದೇಶಕ ಆಲ್ವಿನ್ ಮಾತನಾಡಿ, ''ರಾಜ್ ಬಹದ್ದೂರ್ ಚಿತ್ರದ ನಂತರ ನಾನು ಆ್ಯಕ್ಷನ್ ಕಟ್ ಹೇಳಿರುವ ಎರಡನೇ ಚಿತ್ರವಿದು. ಓಂ ಶಿವಂ, ಲವ್ ಜಾನರ್ನ ಚಿತ್ರ. ಆದ್ರೆ ಚಿತ್ರದಲ್ಲಿ ಕೇವಲ ಲವ್ ಮಾತ್ರ ಇಲ್ಲ. ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳು ಇದರಲ್ಲಿದೆ. ನಮ್ಮ ಚಿತ್ರಕ್ಕೆ 21 ವಯಸ್ಸಿನ ನಾಯಕ ಬೇಕಾಗಿತ್ತು. ಭಾರ್ಗವ್ ಅವರಿಗೂ ಅಷ್ಟೇ ವಯಸ್ಸು. ಹಾಗಾಗಿ ಅವರನ್ನೇ ಈ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಮೊದಲ ಪ್ರಯತ್ನದಲ್ಲೇ ಭಾರ್ಗವ್ ಚೆನ್ನಾಗಿ ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳು, ಅದ್ಧೂರಿ ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ'' ಎಂದು ಮಾಹಿತಿ ಹಂಚಿಕೊಂಡರು.
ನಂತರ ಯುವ ನಟ ಭಾರ್ಗವ್ ಕೃಷ್ಣ ಮಾತನಾಡಿ, "ಆಲ್ವಿನ್ ಅವರು ಉತ್ತಮ ಕಥೆ ಮಾಡಿಕೊಂಡಿದ್ದರು. ಮೊದಲ ಚಿತ್ರವಾಗಿರುವುದರಿಂದ ನಾನು ಸಾಕಷ್ಟು ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಲವ್ ಸ್ಟೋರಿ ಜೊತೆ ಫ್ಯಾಮಿಲಿ ಕಥಾಹಂದರವುಳ್ಳ ಚಿತ್ರ. ಎಲ್ಲರಿಗೂ ನಮ್ಮ ಚಿತ್ರ ಇಷ್ಟವಾಗಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.