2024ರ ಬಹುನಿರೀಕ್ಷಿತ 'ಒಲಿಂಪಿಕ್ಸ್ ಕ್ರೀಡಾಕೂಟ' ನಿನ್ನೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ಆರಂಭವಾಗಿದೆ. ಶುಕ್ರವಾರದಂದು ಅದ್ಧೂರಿ ಉದ್ಘಾಟನಾ ಸಮಾರಂಭ ನೆರವೇರಿತು. ಆಗಸ್ಟ್ 11ರ ವರೆಗೆ ಈ ಕ್ರೀಡಾಕೂಟ ನಡೆಯಲಿದೆ. ಭಾರತೀಯ ಚಿತ್ರರಂಗದ ಖ್ಯಾತನಾಮರು ದೇಶದ ಕ್ರೀಡಾಪಟುಗಳನ್ನು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಬೆಂಬಲಿಸಿದ್ದಾರೆ.
ಕಳೆದ ದಿನ, ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಭಾರತೀಯ ಅಥ್ಲೀಟ್‌ಗಳಾದ ಪಿವಿ ಸಿಂಧು ಮತ್ತು ಶರತ್ ಕಮಲ್, ಸೀನ್ ನದಿಯ ಉದ್ದಕ್ಕೂ ಪರೇಡ್ ಅನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದು. ವಿಡಿಯೋ ಶೇರ್ ಮಾಡಿದ ನಟಿ ಒಲಿಂಪಿಕ್ಸ್ 2024 ಎಂದು ಬರೆದುಕೊಂಡು ಭಾರತೀಯರಿಗೆ ಬೆಂಬಲ ಸೂಚಿಸಿದ್ದಾರೆ.
ದೀಪಿಕಾ ಅವರ ತಂದೆ, ಹೆಸರಾಂತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಕೂಡ ಭಾರತೀಯ ತಂಡದ ಭಾಗವಾಗಿದ್ದರು. ದೀಪಿಕಾ ಅವರ ಇನ್ಸ್ಟಾ ಸ್ಟೋರಿ #ಒಲಿಂಪಿಕ್ಸ್2024 ಎಂಬ ಹ್ಯಾಶ್‌ಟ್ಯಾಗ್ ಅನ್ನು ಹೊಂದಿತ್ತು. ಜೊತೆಗೆ, ಕಬೀರ್ ಖಾನ್ ಅವರ '83' ಚಿತ್ರದ "ಲೆಹ್ರಾ ದೋ" ಹಾಡನ್ನು ಒಳಗೊಂಡಿತ್ತು.
ದೀಪಿಕಾ ನಟನೆಯ ಬಹುನಿರೀಕ್ಷಿತ ಚಿತ್ರ ಸಿಂಗಮ್ ಎಗೇನ್ನ ಸಹನಟ ಅಜಯ್ ದೇವ್ಗನ್ ಕ್ರೀಡಾಪಟುಗಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಕ್ರೀಡಾಪಟುಗಳನ್ನು "ನಮ್ಮ ರಾಷ್ಟ್ರದ ಹೆಮ್ಮೆ" ಎಂದು ಬಣ್ಣಿಸಿದ್ದಾರೆ. ಜೊತೆಗೆ ಅವರ ಪರ್ಫಾಮೆನ್ಸ್ ಬಗ್ಗೆ ತಮ್ಮ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಬೆಂಬಲದ ಜೊತೆಗೆ ರಾಷ್ಟ್ರಾದ್ಯಂತದ ಬೆಂಬಲದ ಭರವಸೆ ನೀಡಿದರು.