ನಾಗ್ಪುರ:ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ನಾಗ್ಪುರದಲ್ಲಿ ಕಂಗನಾ ರನೌತ್ ಮತ್ತು ಅನುಪಮ್ ಖೇರ್ ಅಭಿನಯದ 'ಎಮರ್ಜೆನ್ಸಿ' ಚಲನಚಿತ್ರ ವೀಕ್ಷಿಸಿದರು. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, ಚಿತ್ರದ ವಿಶೇಷ ಸ್ಕ್ರೀನಿಂಗ್ನ ಕೆಲ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಗಡ್ಕರಿ, ಕಂಗನಾ ಮತ್ತು ಖೇರ್ ಪರಸ್ಪರ ಮಾತನಾಡುತ್ತಿರುವುದನ್ನು ಒಂದು ಚಿತ್ರದಲ್ಲಿ ಕಾಣಿಸುತ್ತದೆ.
"ಜನವರಿ 17ರಂದು ಬಿಡುಗಡೆಯಾಗಲಿರುವ ಎಮರ್ಜೆನ್ಸಿ ಚಿತ್ರದ ಪ್ರದರ್ಶನದಲ್ಲಿ ನಿತಿನ್ ಜಿ ಅವರೊಂದಿಗೆ" ಎಂದು ಕಂಗನಾ ತಮ್ಮ ಪೋಸ್ಟ್ಗೆ ಶೀರ್ಷಿಕೆ ಬರೆದಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿವ ಗಡ್ಕರಿ, ನಮ್ಮ ರಾಷ್ಟ್ರದ ಇತಿಹಾಸದ ಕರಾಳ ಅಧ್ಯಾಯವನ್ನು ಸತ್ಯಾಸತ್ಯತೆ ಮತ್ತು ಉತ್ಕೃಷ್ಟತೆಯೊಂದಿಗೆ ಪ್ರಸ್ತುತಪಡಿಸಿದ್ದಕ್ಕಾಗಿ ಎಮರ್ಜೆನ್ಸಿ ಚಿತ್ರ ತಂಡವನ್ನು ಶ್ಲಾಘಿಸುವುದಾಗಿ ಹೇಳಿದ್ದಾರೆ.
"ಇಂದು ನಾಗ್ಪುರದಲ್ಲಿ ಟೀಂ ಕಂಗನಾ ಮತ್ತು ಅನುಪಮ್ ಖೇರ್ ಅಭಿನಯದ 'ಎಮರ್ಜೆನ್ಸಿ' ಚಲನಚಿತ್ರದ ಪ್ರದರ್ಶನದಲ್ಲಿ ಭಾಗಿಯಾಗಿದ್ದೆ. ನಮ್ಮ ರಾಷ್ಟ್ರದ ಇತಿಹಾಸದ ಕರಾಳ ಅಧ್ಯಾಯವನ್ನು ಇಷ್ಟೊಂದು ಸತ್ಯಾಸತ್ಯತೆ ಮತ್ತು ಉತ್ಕೃಷ್ಟತೆಯೊಂದಿಗೆ ಪ್ರಸ್ತುತಪಡಿಸಿದ ಚಲನಚಿತ್ರ ನಿರ್ಮಾಪಕರು ಮತ್ತು ನಟರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಭಾರತದ ಇತಿಹಾಸದಲ್ಲಿನ ಮಹತ್ವದ ಅವಧಿಯೊಂದನ್ನು ಚಿತ್ರಿಸುವ ಈ ಚಿತ್ರವನ್ನು ಎಲ್ಲರೂ ನೋಡಬೇಕೆಂದು ನಾನು ಕರೆ ನೀಡುತ್ತೇನೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.