'ಅನಿಮಲ್' ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ 'ರಾಮಾಯಣ' ಸಿನಿಮಾಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ತಯಾರಿಗೆ ಸಂಬಂಧಿಸಿದಂತೆ ಈಗಾಗಲೇ ಫೋಟೋಗಳು ವೈರಲ್ ಆಗಿವೆ. ಚಿತ್ರದಲ್ಲಿ ರಣ್ಬೀರ್ ಕಪೂರ್ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಪ್ರಾಜೆಕ್ಟ್ ಬಗ್ಗೆ ನಿರ್ಮಾಪಕರು ಮೌನ ಮುಂದುವಸಿರಿದ್ದರೂ, ಸಿನಿಮಾ ತಯಾರಿಗೆ ಸಂಬಂಧಿಸಿದ ಫೋಟೋ-ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ಅದ್ಧೂರಿ ಸೆಟ್‌ನ ಕೆಲ ಫೋಟೋ-ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಸೋರಿಕೆಯಾಗಿರುವ ವಿಡಿಯೋಗಳಲ್ಲಿ, ಪ್ರಾಚೀನ ಕಾಲವನ್ನು ಪ್ರದರ್ಶಿಸುವಂತಹ ಕೆಲ ನಿರ್ಮಾಣ ಕಾರ್ಯಗಳನ್ನು ನಡೆಸುತ್ತಿರುವುದನ್ನು ಕಾಣಬಹುದು. ಸೆಟ್ನಲ್ಲಿ ಅನೇಕ ಕಂಬಗಳು ಮತ್ತು ಮರದ ಗೋಡೆಗಳು ಗೋಚರಿಸುತ್ತವೆ. ಕೆಲ ದೇವಾಲಯಗಳನ್ನು ನಿರ್ಮಿಸಲು ಸಿದ್ಧತೆಗಳೂ ನಡೆಯುತ್ತಿವೆ.
ರಾಮಾಯಣ ಚಿತ್ರಕ್ಕಾಗಿ 11 ಕೋಟಿ ರೂಪಾಯಿ ಮೌಲ್ಯದ ಅಯೋಧ್ಯೆಯ ಸೆಟ್ ನಿರ್ಮಿಸಲಾಗಿದೆ ಎಂದು ವರದಿಗಳು ಸೂಚಿಸಿವೆ. ಈ ಹೊತ್ತಲ್ಲಿ ಸೆಟ್‌ನ ಕೆಲ ಫೋಟೋ ವಿಡಿಯೋಗಳು ಲೀಕ್ ಆಗಿರುವುದು ಸಿನಿಪ್ರಿಯರ ನಿರೀಕ್ಷೆ ಹೆಚ್ಚಿಸಿದೆ. ಮತ್ತೊಂದೆಡೆ, ರಾಮನ ಲುಕ್ಗಾಗಿ ರಣ್ಬೀರ್ 3D ಸ್ಕ್ಯಾನ್ ಮಾಡಬೇಕಾಗಿದೆ ಎಂಬ ಸುದ್ದಿ ಇದೆ.
ವರದಿಗಳ ಪ್ರಕಾರ, ನಿತೇಶ್ ತಿವಾರಿ ಅವರ ಈ ಚಿತ್ರಕ್ಕಾಗಿ ರಣ್ಬೀರ್ ಕಪೂರ್ ಧ್ವನಿ ಮತ್ತು ಉಚ್ಛಾರಣೆಯ ತರಬೇತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಹೆಡ್ಸ್ಟ್ಯಾಂಡ್ ಹಾಗೂ ಆರ್ಚರಿ ಕಲಿಯುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಸ್ವತಃ ತರಬೇತುದಾರರೇ ನಟನ ತರಬೇತಿಯ ಫೋಟೋಗಳನ್ನು ಹಂಚಿಕೊಂಡಿದ್ದರು. ಹೆಡ್ಸ್ಟ್ಯಾಂಡ್ ಫೋಟೋಗೆ ರಾಮಾಯಣ ಎಂದು ಕ್ಯಾಪ್ಷನ್ ಕೊಡಲಾಗಿತ್ತು. ಈ ಹಿನ್ನೆಲೆ ರಾಮಾಯಣ ಸಿನಿಮಾ ಬರೋದು ಬಹುತೇಕ ಖಚಿತವಾಗಿದೆ.