ಹೈದರಾಬಾದ್: ಟಾಲಿವುಡ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ದಾಂಪತ್ಯ ಜೀವನ ಶುರುಮಾಡಲು ಸಜ್ಜಾಗಿದ್ದಾರೆ. ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಟನ ತಂದೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ವದಂತಿಗಳು ನಿಜವೆಂದು ಸಾಬೀತುಪಡಿಸಿದ್ದಾರೆ.
ತೆಲುಗು ಸೂಪರ್ ಸ್ಟಾರ್ ಹಾಗೂ ನಾಗ ಚೈತನ್ಯ ಅವರ ತಂದೆ ನಾಗಾರ್ಜುನ ಅಕ್ಕಿನೇನಿ ಅವರಿಂದು ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ತಮ್ಮ ಅಫೀಶಿಯಲ್ ಸೋಷಿಯಲ್ ಮೀಡಿಯಾದಲ್ಲಿ ನಿಶ್ಚಿತಾರ್ಥ ಸಮಾರಂಭದ ಫೋಟೋಗಳನ್ನು ಶೇರ್ ಮಾಡಿದ್ದು, ಈ ಅನೌನ್ಸ್ಮೆಂಟ್ ಅವರ ಅಭಿಮಾನಿ ಬಳಗದಲ್ಲಿ ಸಂತಸದ ಅಲೆಯೆಬ್ಬಿಸಿದೆ.
ನಾಗಾರ್ಜುನ ಪೋಸ್ಟ್: ನಿಶ್ಚಿತಾರ್ಥವು ಒಂದು ಆತ್ಮೀಯ, ಖಾಸಗಿ ಸಮಾರಂಭವಾಗಿತ್ತು. ಕೇವಲ ಕುಟುಂಬಸ್ಥರು ಮತ್ತು ಸ್ನೇಹಿತರು ಭಾಗಿಯಾಗಿದ್ದರು. ಸಂತಸದ ಕ್ಷಣಗಳನ್ನು ಹಂಚಿಕೊಂಡ ನಾಗಾರ್ಜುನ, "ನಮ್ಮ ಮಗ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಇಂದು ಬೆಳಗ್ಗೆ 9:42ಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಬಹಳ ಖುಷಿಯಾಗಿದೆ. ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇವೆ. ಹ್ಯಾಪಿ ಕಪಲ್ಗೆ ಅಭಿನಂದನೆಗಳು. ಜೋಡಿಗೆ ಜೀವನಪರ್ಯಂತ ಪ್ರೀತಿ, ಸಂತೋಷ ಸಿಗಲಿ ಎಂದು ಹಾರೈಸುತ್ತೇನೆ. ದೇವರು ಆಶೀರ್ವದಿಸಲಿ. 8.8.8 ಅನಂತ ಪ್ರೀತಿಯ ಆರಂಭ'' ಎಂದು ಬರೆದುಕೊಂಡಿದ್ದಾರೆ.
ಪ್ರೇಮಪಕ್ಷಿಗಳು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರೀಕ್ಷೆಯಿದೆ. ಅಭಿಮಾನಿಗಳು ತಮ್ಮ ಮೆಚ್ಚಿನ ನಟ ನಟಿಗೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಶುರುಹಚ್ಚಿಕೊಂಡಿದ್ದಾರೆ.
ನಾಗ ಚೈತನ್ಯ, ಶೋಭಿತಾ ಧೂಳಿಪಾಲ ಡೇಟಿಂಗ್ ವದಂತಿ ಈ ಹಿಂದೆಯೇ ಹರಡಿತ್ತು. ಕೆಲ ಸಮಯದ ಹಿಂದೆ ಅವರ ವೆಕೇಶನ್ ಫೋಟೋಗಳು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಊಹಾಪೋಹಗಳು ಉಲ್ಭಣಗೊಂಡವು. ಆದ್ರೆ ಈ ಬಗ್ಗೆ ನಟ ನಟಿ ಮಾಧ್ಯಮಗಳ ಮುಂದೆ ಮೌನ ವಹಿಸಿದ್ದರು. ಇಂದು ನಿಶ್ಚಿತಾರ್ಥ ಮಾಡಿಕೊಂಡು ಊಹಾಪೋಹಗಳು ನಿಜವೆಂದು ಸಾಬೀತುಪಡಿಸಿದ್ದಾರೆ.
ನಾಗ ಚೈತನ್ಯ ಮತ್ತು ಶೋಭಿತಾ ಪರಸ್ಪರ ಸಂತೋಷಕರ, ಗುಣಮಟ್ಟದ ಸಮಯ ಕಳೆಯುತ್ತಿದ್ದಾರೆ ಎಂದು ಮೂಲವೊಂದು ಕೆಲವು ತಿಂಗಳ ಹಿಂದೆ ನ್ಯೂಸ್ ಪೋರ್ಟಲ್‌ಗೆ ತಿಳಿಸಿತ್ತು. ಅವರು ಆಗಾಗ್ಗೆ ಪ್ರವಾಸ ಕೈಗೊಂಡಿದ್ದರು. ಅದಾಗ್ಯೂ, ತಮ್ಮ ಖಾಸಗಿ ಜೀವನವನ್ನು ಸಾರ್ವಜನಿಕ ವಲಯದಿಂದ ದೂರವಿಟ್ಟಿದ್ದರು.
ಸೂಪರ್ ಸ್ಟಅರ್ ನಾಗ ಚೈತನ್ಯ ಈ ಹಿಂದೆ ಸೌತ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಅವರೊಂದಿಗೆ ದಾಂಪತ್ಯ ಜೀವನ ನಡೆಸಿದ್ದಾರೆ. 2009ರಲ್ಲಿ ಪ್ರೇಮಕಥೆ 'ಯೆ ಮಾಯಾ ಚೆಸಾವೆ' ಸೆಟ್‌ನಲ್ಲಿ ಪರಸ್ಪರ ಭೇಟಿಯಾದರು. ಸ್ನೇಹ ಪ್ರೇಮಕ್ಕೆ ತಿರುಗಿತು. ಭೇಟಿಯಾದ ಕೆಲ ಸಮಯದ ನಂತರ ಡೇಟಿಂಗ್ ಪ್ರಾರಂಭಿಸಿದರು. 2017ರಲ್ಲಿ ದಾಂಪತ್ಯ ಜೀವನ ಆರಂಭಿಸಿ 2021ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಜಂಟಿ ಹೇಳಿಕೆಯೊಂದಿಗೆ ತಾವು ಬೇರೆಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು. ಆದರೆ ಈ ವಿಚ್ಛೇದನಕ್ಕೆ ಸ್ಪಷ್ಟ ಕಾರಣ ಕೊಡಲಿಲ್ಲ.
ಇದನ್ನೂ ಓದಿ:ಲೈಟ್ ಬಾಯ್ನಿಂದ 'ಟಾಕ್ಸಿಕ್'ಗೆ ಕ್ಲ್ಯಾಪ್ ಮಾಡಿಸಿದ ರಾಕಿ ಬಾಯ್: ಇಂದೇ ಶೂಟಿಂಗ್ನಲ್ಲಿ ಭಾಗಿಯಾಗಲಿರುವ ಯಶ್ - Yash Toxic
2013ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡ ಶೋಭಿತಾ ಧೂಳಿಪಾಲ 2016ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಬಹುಭಾಷೆಗಳಲ್ಲಿ ನಟಿಸುವ ಮೂಲಕ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಕೊನೆಯದಾಗಿ 'ಮಂಕಿ ಮ್ಯಾನ್' ಚಿತ್ರದಲ್ಲಿ ಕಾಣಿಸಿಕೊಂಡರು. ಸಿಕಂದರ್ ಖೇರ್, ದೇವ್ ಪಟೇಲ್, ಶಾರ್ಲ್ಟೋ ಕಾಪ್ಲೆ, ಮಕರಂದ್ ದೇಶ್ಪಾಂಡೆ, ಅಶ್ವಿನಿ ಕಲ್ಸೇಕರ್ ಸೆರಿದಂತೆ ಹಲವರೊಂದಿಗೆ ನಟಿಸಿದ್ದರು. ಮುಂದೆ ಆರ್ಎಸ್ವಿಪಿ ಮೂವೀಸ್ ನಿರ್ಮಾಣದ 'ಸಿತಾರಾ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಕಾಂತಾರ ಸೂಪರ್ ಹಿಟ್ ಆದ್ರೂ ರಿಷಬ್ ಬಾಡಿಗೆ ಮನೆಯಲ್ಲಿದ್ದಾರೆ: ಪ್ರಮೋದ್ ಶೆಟ್ಟಿ - Pramod Shetty Interview
ಇನ್ನು ನಾಗ ಚೈತನ್ಯ, ಚಂದೂ ಮೊಂಡೇಟಿ ನಿರ್ದೇಶನದ ತಂಡೇಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ನಾಗ ಚೈತನ್ಯ ಜೊತೆ ಸಾಯಿ ಪಲ್ಲವಿ ತೆರೆಹಂಚಿಕೊಂಡಿದ್ದು, ಬನ್ನಿ ವಾಸು ನಿರ್ಮಾಣ ಮಾಡಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಲ್ಲು ಅರ್ಜುನ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರ ನೈಜ ಘಟನೆಗಳನ್ನು ಆಧರಿಸಿದೆ.