ಬಹುತಾರಾಗಣದ ಬಹುನಿರೀಕ್ಷಿತ ಚಿತ್ರ 'ಕಲ್ಕಿ 2898 ಎಡಿ'. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಅನಾವರಣಗೊಂಡು ಸಿನಿಪ್ರಿಯರ ಕುತೂಹಲ ಕೆರಳಿಸಿತ್ತು. ಕಳೆದ ದಿನ ಚಿತ್ರದ ಮತ್ತೊಂದು ಟ್ರೇಲರ್ ಅನಾವರಣಗೊಂಡಿದೆ. ಮೊದಲ ಟ್ರೇಲರ್ ಭಾರತೀಯ ಪುರಾಣಗಳಲ್ಲಿ ಬೇರೂರಿರುವ 'ಕಲ್ಕಿ 2898 ಎಡಿ'ಯ ಸಿನಿಮೀಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸಿದರೆ, ಇದೀಗ ಬಿಡುಗಡೆ ಆಗಿರುವ ಟ್ರೇಲರ್ ಚಿತ್ರದ ಆಳವನ್ನು ನೋಡುಗನಿಗೆ ಪರಿಚಯಿಸಿದೆ. ಇದು ಅಸಾಧಾರಣ ಚಿತ್ರದ ಅದ್ಭುತ ಟ್ರೇಲರ್ ಅಂತಿದ್ದಾರೆ ನೋಡುಗರು.
ಟ್ರೇಲರ್‌ನ ಪ್ರತೀ ಪಾತ್ರಗಳು ವಿಭಿನ್ನ. ಒಂದಕ್ಕಿಂತ ಒಂದನ್ನು ಮೀರಿಸುವಂಥ ಪಾತ್ರಗಳು. ಭಾರತೀಯ ಚಿತ್ರರಂಗದ ದಿಗ್ಗಜ ಅಮಿತಾಭ್ ಬಚ್ಚನ್ ಅಶ್ವತ್ಥಾಮನಾಗಿ ಧೈರ್ಯಶಾಲಿ ಸಾಹಸಗಳನ್ನು ಪ್ರದರ್ಶಿಸಿದ್ದಾರೆ. ಉಳಗನಾಯಗನ್ ಕಮಲ್ ಹಾಸನ್ ಯಾಸ್ಕಿನ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಭೈರವನಾಗಿ, ದೀಪಿಕಾ ಪಡುಕೋಣೆ ಸುಮತಿ ಪಾತ್ರದಲ್ಲಿ ಎದುರಾಗಿದ್ದಾರೆ. ದಿಶಾ ಪಟಾನಿ ರಾಕ್ಸಿಯಾಗಿ ಮಿಂಚು ಹರಿಸಿದ್ದಾರೆ. ಈ ಟ್ರೇಲರ್ಗೆ ಡಾರ್ಲಿಂಗ್ ಫ್ಯಾನ್ಸ್ ಫಿದಾ ಆಗಿದ್ದಾರೆ.
ಕಲ್ಕಿ 2898 ಎಡಿ ಟ್ರೇಲರ್‌ಗಳಲ್ಲಿ ವಿಭಿನ್ನ ಪ್ರಪಂಚಗಳನ್ನು ಕಾಣಬಹುದು. ಒಂದು ಕಾಶಿ. ಅದರ ಉಳಿವಿಗಾಗಿ ಹೋರಾಡುತ್ತಿರುವ, ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ದೃಶ್ಯವೈಭವವೇ ಇಡೀ ಟ್ರೇಲರ್‌ನ ಜೀವಾಳ. ಊಹೆಗೂ ನಿಲುಕದ ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳೇ ಇಲ್ಲಿನ ಹೈಲೈಟ್. ಅತ್ಯುತ್ತಮ ಹಿನ್ನೆಲೆ ಸಂಗೀತ, ಹೈ ಕ್ಲಾಸ್ ವಿಎಫ್ಎಕ್ಸ್ ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ ಈ ಸಿನಿಮಾ ಮೂಡಿ ಬಂದಿದೆ.